ಮೈಸೂರು: ಸರ್ಕಾರದ ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಿದಾಗಮಾತ್ರ ಯೋಜನೆಗಳು ಫಲಪ್ರದವಾಗುತ್ತದೆ ಎಂದು ಬಿಜೆಪಿ ಮೈಸೂರು ನಗರಾಧ್ಯಕ್ಷ ಶ್ರೀವತ್ಸ ತಿಳಿಸಿದರು.
ಕೆ.ಎಂ ನಿಶಾಂತ್ ನೇತೃತ್ವದ ಜನ ಸೇವಾ ಕೇಂದ್ರದ ವತಿಯಿಂದ ಸರ್ಕಾರದ ವಿವಿದ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಅದೇಶ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರ ಉಪಯೋಗಕ್ಕಾಗಿ ಅನೇಕ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳ ಮಾಹಿತಿ, ಅರ್ಜಿಸಲ್ಲಿಸುವ ವಿಧಾನ, ಯೋಜನೆಯಿಂದಾಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.
ಕೇಂದ್ರ ಹಾಗು ರಾಜ್ಯ ಸರ್ಕಾರದ ವಿವಿದ ಯೋಜನೆಗಳ ಉಚಿತ ನೊಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು ಹಾಗೂ ಅನಾಥಶವಗಳ ಸಂಸ್ಕಾರಕ್ಕಾಗಿ ತುರ್ತು ವಾಹನ ಸೇವೆಗೆ ಚಾಲನೆ ನೀಡಲಾಯಿತು.
ಸರ್ಕಾರ ಕೋವಿಡ್ ಸಂಕಷ್ಠಕ್ಕೀಡಾದವರಿಗೆ ಹಲವಾರು ರೀತಿಯಲ್ಲಿ ಸಹಾಯ ಹಸ್ತವನ್ನು ಚಾಚಿದೆ. ಆತ್ಮನಿರ್ಭರ ಭಾರತದ ಯೋಜನೆಯಡಿಯಲ್ಲಿ ರಸ್ತೆಬದಿ ವ್ಯಾಪಾರಿಗಳಿಗೆ ಬಂಡವಾಳರೂಪದಲ್ಲಿ ಬಡ್ಡಿರಹಿತ ಕಿರು ಸಾಲ, ಎಲ್ಲ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸಹಾಯಧನ ಮುಂತಾದ ಸಹಾಯ ನೀಡುತ್ತಿದೆ ಎಂದು ವಿವರಿಸಿದರು.
ಈ ಎಲ್ಲಾ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಅರಿವುಮೂಡಿಸಿ ಅರ್ಜಿಸಲ್ಲಿಸಿ ಅವರೆಲ್ಲರಿಗೂ ಸರ್ಕಾರದ ಸವಲತ್ತು ಸಿಗಲು ಅನುಕೂಲ ಕಲ್ಪಿಸಿಕೊಡುತ್ತಿರುವ ಕೆ.ಎಂ ನಿಶಾಂತ್‍ರವರ ಜನಸೇವಾ ಕೇಂದ್ರ ಹಾಗೂ ಬೆಳಕು ಚಾರಿಟಬಲ್ ಟ್ರಸ್ಟ್‌ನ ಕಾರ್ಯಗಳು ಪ್ರಶಂಸನೀಯ ಎಂದು ಹೇಳಿದರು.
ನಮ್ಮ ಮೈಸೂರಿನ ಬಿಜೆಪಿ ಕಛೇರಿಯನ್ನು ಕೇವಲ ರಾಜಕೀಯ ಕಛೇರಿಯಾಗಿಸದೇ ಅದನ್ನು ಸಾರ್ವಜನಿಕರ ಸೇವೆಗಾಗಿ ಮೀಸಲಿಡುವ ಉದ್ದೇಶವನ್ನು ಹೊಂದಿದ್ದು, ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಶ್ರೀವತ್ಸ ತಿಳಿಸಿದರು.
ನಂತರ ಮಾತನಾಡಿದ ಕುಂದೂರು ಮಠದ ಮಠಾಧಿಶರಾದ ಶ್ರೀ ಶರತ್‍ಚಂದ್ರ ಸ್ವಾಮಿಜಿ ಬೆಳಕು ಚಾರಿಟಬಲ್ ಟ್ರಸ್ಟ್ ಕೋವಿಡ್19ರ ಕ್ಲಿಷ್ಟಕರ ಸಂದರ್ಭದಲ್ಲಿ ಹಲವಾರು ರೀತಿಯ ಸೇವೆಯನ್ನು ದೀನದಲಿತರಿಗೆ ಮತ್ತು ಕೊವಿಡ್ ಸಂಕಷ್ಠಕ್ಕೆ ಒಳಗಾದವರಿಗೆ ನೀಡುತ್ತಾ ಬಂದಿದೆ.
ಇದೀಗ ಅನಾಥ ಶವಗಳಿಗೆ ಹಾಗೂ ಆರ್ಥಿಕ ಸಂಕಷ್ಠದಲ್ಲಿರುವವರ ಶವಸಂಸ್ಕಾರ ಮತ್ತು ತುರ್ತುಚಿಕಿತ್ಸೆಗೆಂದು ತುರ್ತುವಾಹನ ಸೇವೆಯನ್ನು ಪ್ರಾರಂಭಿಸಿರುವುದು ಮಾನವೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆ.ಎಂ. ನಿಶಾಂತ್ ಮಾತನಾಡಿ 25 ಪಿಂಚಣಿ ಫಲಾನುಭವಿಗಳಿಗೆ ಅದರ ಆದೇಶ ಪತ್ರಗಳನ್ನು ಹಸ್ತಾಂತರಿಸಿದ್ದೇವೆ, ಸಂಸದರಾದ ಪ್ರತಾಪ ಸಿಂಹ ರವರ ಸಹಕಾರದೊಂದಿಗೆ 50 ಕ್ಕೂ ಹೆಚ್ಚು ಜನರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯ ಮೂಲಕ ಅನಾರೋಗ್ಯದ ಚಿಕಿತ್ಸೆಗೆ ಸಹಾಯಧನವನ್ನು ತಲುಪಿಸಿದ್ದೇವೆ ಎಂದು ಹೇಳಿದರು.
ಕೋವಿಡ್ ನಿಂದ ಮೃತಪಟ್ಟವರಲ್ಲಿ 42 ಕುಟುಂಬಗಳಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರದ ಕೋವಿಡ್ ಸಹಾಯಧನವನ್ನು ಒದಗಿಸಿದ್ದೇವೆ ಅದಲ್ಲದೆ ಪ್ರತೀ ತಿಂಗಳ 2ನೇ ಭಾನುವಾರ ಒಂದಲ್ಲ ಒಂದು ಬಡಾವಣೆಗಳಲ್ಲಿ ಸರ್ಕಾರಿ ಸವಲತ್ತುಗಳ ಉಚಿತ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಆರ್ಥಿಕವಾಗಿ ಹಿಂದುಳಿದ ಮತ್ತು ಅನಾಥ ಶವಗಳ ಸಂಸ್ಕಾರಕ್ಕಾಗಿ ಹಾಗು ತುರ್ತು ಸಂಧರ್ಭಗಳಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ತುರ್ತು ವಾಹನ ಸೇವೆಯನ್ನು ಪ್ರಾರಂಭಿಸಿದ್ದು ನಮ್ಮ ಹೆಲ್ಪ್ ಲೈನ್ ಸಂಖ್ಯೆ 9379769966 ಗೆ ಕರೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಕೆ.ಪಿ ಮಧುಸೂದನ, ರಾಮಪ್ರಸಾದ್, ಪ್ರದೀಪ್, ವಿಕ್ರಂ ಐಯ್ಯಂಗಾರ್, ನಂಜುಂಡಸ್ವಾಮಿ, ಅರುಣ್, ರೇಖಾ, ಜ್ಯೋತಿ, ಶಿವಕುಮಾರಿ, ಚಂದ್ರು, ಶಿವರಾಜ್ ಹಾಗು ಫಲಾನುಭವಿಗಳು, ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.

