ಮೈಸೂರು: ಕೋವಿಡ್ 3ನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.
ಮೈಸೂರಿನ ಬನ್ನಿಮಂಟಪದಲ್ಲಿನ ಪಂಜಿನ ಕವಾಯತು ಮೈದಾನದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಎಸ್ ಟಿಎಸ್ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿದರು.
ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕೆಂದರು ಸಚಿವ ಎಸ್ ಟಿ. ಸೋಮಶೇಖರ್ ಮನವಿ ಮಾಡಿದರು.
ಮೈಸೂರು ಜಿಲ್ಲೆಯಲ್ಲಿ ಈವರೆಗೆ ಶೇ. 100ರಷ್ಟು ಮೊದಲ ಡೋಸ್ ಲಸಿಕೆ ಹಾಕಲಾಗಿದ್ದು, ಶೇ. 88ರಷ್ಟು ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಲಸಿಕೆಯನ್ನು ಸಹ ನೀಡಲಾಗುತ್ತಿದೆ. ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಈ ಮಹಾಮಾರಿಯನ್ನು ತಡೆಗಟ್ಟಲು ಪ್ರಯತ್ನಿಸಬೇಕಾಗಿದೆ ಎಂದರು.
ಜಲ ಜೀವನ್ ಮಿಷನ್ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ 5 ಲಕ್ಷದ 15 ಸಾವಿರದ 194 ಕುಟುಂಬಗಳಿಗೆ ನಳ ನೀರು ಸರಬರಾಜು ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಗಣರಾಜ್ಯೋತ್ಸವವು ವರ್ಷದ ಮೊದಲ ರಾಷ್ಟ್ರೀಯ ಹಬ್ಬವಾಗಿದೆ. ಗಣರಾಜ್ಯೋತ್ಸವವನ್ನು ಗೌರವ ಹಾಗೂ ಅಭಿಮಾನದಿಂದ ಬಹಳ ಅರ್ಥಪೂರ್ಣವಾಗಿ ಆಚರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.
ಭಾರತೀಯರಾದ ನಮಗೆ ಗಣರಾಜ್ಯೋತ್ಸವ ಅತ್ಯಂತ ಮಹತ್ವದ ದಿನಾಚರಣೆ. ಅಪಾರ ತ್ಯಾಗ ಬಲಿದಾನಗಳ ಮೂಲಕ ಈ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಲಭಿಸಿತು. ಆದರೆ ನಮ್ಮ ದೇಶಕ್ಕೆ ನಮ್ಮದೇ ಆದ ಸಂವಿಧಾನ ಇರಲಿಲ್ಲ. ಸ್ವತಂತ್ರ ಭಾರತವನ್ನು ಮುನ್ನಡೆಸಲು ನಮಗೆ ಸೂಕ್ತ ಸಂವಿಧಾನದ ಅವಶ್ಯಕತೆ ಇತ್ತು ಎಂದ ಅವರು, ಜಗತ್ತಿನಲ್ಲೇ ಅತ್ಯಂತ ದೊಡ್ಡದಾದ ಲಿಖಿತ ಸಂವಿಧಾನವನ್ನು ಭಾರತ ಹೊಂದಿದೆ ಎಂದು ಹೇಳಿದರು.
1946ರಲ್ಲಿ ರಚನೆಯಾದ ಸಂವಿಧಾನ ಅಂತಿಮವಾಗಿ 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಲಾಗುತ್ತದೆ. 1950ರ ಜನವರಿ 26ರಂದು ಈ ಸಂವಿಧಾನ ಜಾರಿಗೆ ಬರುತ್ತದೆ. ಅಂದಿನಿಂದ ನಾವು ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ ಎಂದ ಅವರು ತಿಳಿಸಿದರು.
ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನವಾದ ಮೂಲಭೂತ ಹಕ್ಕುಗಳನ್ನು ನೀಡಿದೆ. ಹಾಗೆಯೇ ಪ್ರಜೆಗಳು ಅನುಸರಿಸಬೇಕಾದ ಕರ್ತವ್ಯಗಳ ಬಗ್ಗೆಯೂ ತಿಳಿಸಿದೆ. ರಾಜ್ಯ ನಿರ್ದೇಶಕ ತತ್ವಗಳ ಮೂಲಕ ಸರ್ಕಾರದ ಗುರಿ ಮತ್ತು ಉದ್ದೇಶ ಏನಿರಬೇಕು ಎಂದು ತಿಳಿಸಲಾಗಿದೆ.
ಪ್ರಜಾಪ್ರಭುತ್ವದ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಸ್ವರೂಪ, ಲಕ್ಷಣಗಳು ಹಾಗೂ ಕಾರ್ಯವ್ಯಾಪ್ತಿಯನ್ನು ಸಂವಿಧಾನದಲ್ಲಿ ತಿಳಿಸಲಾಗಿದೆ. ಒಕ್ಕೂಟ ಸರ್ಕಾರಕ್ಕೆ ಮತ್ತು ರಾಜ್ಯಗಳ ಸರ್ಕಾರಕ್ಕೆ ಅದರದೇ ಆದ ಅಧಿಕಾರವನ್ನು ನೀಡಿ, ಪ್ರಜೆಗಳ ಹಿತಕ್ಕಾಗಿ ಆಡಳಿತ ನಡೆಸಲು ಮಾರ್ಗದರ್ಶನ ನೀಡಿದೆ ಎಂದರು.
ಪ್ರತಿಯೊಬ್ಬ ಪ್ರಜೆಯು ಏಕತೆ ಮತ್ತು ಸಮಾನತೆಯ ಭಾವನೆಯೊಂದಿಗೆ ಗೌರವದಿಂದ ಬದುಕಲು ಅವಕಾಶ ಮಾಡಿಕೊಟ್ಟಿದೆ. ಶಾಂತಿ, ಸಹಿಷ್ಣುತೆ, ಸೌಹಾರ್ದತೆ ಹಾಗೂ ಸಮಾನತೆಯು ನಮ್ಮ ದೇಶವನ್ನು ಭದ್ರಪಡಿಸುವ ಮೌಲ್ಯಗಳಾಗಿವೆ ಎಂದವರು ತಿಳಿಸಿದರು.
ರಾಜ್ಯಗಳು ಬೇರೆ, ಬೇರೆ ಇರಬಹುದು. ಭಾಷೆಗಳು ಬೇರೆ ಬೇರೆ ಇರಬಹುದು, ಮತ-ಪಂಥಗಳು, ಆಚಾರ-ವಿಚಾರಗಳು ವಿಭಿನ್ನವಾಗಿರಬಹುದು. ಆದರೆ ಭಾವನೆ ಮಾತ್ರ ಒಂದೆ. ಅದು ನಾವು ಭಾರತೀಯರು ಎಂಬುದು. ವಿವಿಧತೆಯಲ್ಲಿ ಏಕತೆ ಇರುವುದೇ ಭಾರತದ ಸೌಂದರ್ಯವಾಗಿದೆ ಎಂದವರು ಹೇಳಿದರು.

