ಮೈಸೂರು: ಕಾನೂನನ್ನು ವಿರೋಧಿಸುವವರಿಗೆ ಪೊಲೀಸರ ಭಯವಿರಬೇಕು. ಕಾನೂನನ್ನು ಉಲ್ಲಂಘಿಸುವವರನ್ನು ಪೊಲೀಸರು ಶಿಕ್ಷಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಕವಾಯತು ಮೈದಾನದಲ್ಲಿ ಬುಧವಾರ ಅಕಾಡೆಮಿಯ 45ನೇ ತಂಡದ ಪ್ರೊಬೇಷನರಿ ಪೊಲೀಸ್ ಉಪನಿರೀಕ್ಷಕರು (ಸಿವಿಲ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸೈನಿಕರಷ್ಟು ಕಠಿಣವಾಗಿ ಪೊಲೀಸರು ಇರಬೇಕಾಗಿಲ್ಲ, ಮನುಷ್ಯತ್ವ ಇರಬೇಕು,ಆದರೆ ಕಾನೂನನ್ನು ವಿರೋಧಿಸುವವರಿಗೆ ಪೊಲೀಸ್ ಎಂದರೆ ಭಯವೂ ಇರಬೇಕು ಎಂದು ತಿಳಿಸಿದರು.
ತರಬೇತಿಯಲ್ಲಿ ಸೈಬರ್, ಶಸ್ತ್ರಗಳ ಬಳಕೆ ಸೇರಿದಂತೆ ಅನೇಕ ಸಂಗತಿ ಯನ್ನು ಕಲಿತಿದ್ದೀರಿ.ಸೈನ್ಯಕ್ಕಿಂತ ನೀವು ಹೇಗೆ ಬದಲು ಎಂಬುದನ್ನು ಮುಖ್ಯವಾಗಿ ನೆನಪಿಡಬೇಕು ಎಂದು ಸಚಿವರು ಹೇಳಿದರು.
ಸೈನ್ಯಿಕರಿಗೆ ಎದುರುಗಡೆ ಶತ್ರು ಕಾಣಿಸುತ್ತಾರೆ. ಪಲೀಸರ ಎದುರಿಗೆ ಹಾಗಿಲ್ಲ. ದೇಶದಲ್ಲಿ ತಪ್ಪು ಹಾದಿ ತುಳಿದವರನ್ನು ಸರಿದಾರಿಗೆ ತರುವುದಕ್ಕಾಗಿ ಶಿಕ್ಷೆ ಅಗತ್ಯವಿದೆ,ಈ ದೇಶದ ಕಾನೂನನ್ನು ಯಾರು ಗೌರವಿಸುತ್ತಾರೋ ಅವರನ್ನು ಗೌರವಿಸುವ ಕೆಲಸವೂ ಆಗಬೇಕು ಎಂದು ಹೇಳಿದರು.
ರಕ್ಷಣಾ ಸಿಬ್ಬಂದಿ ಎಂದಾಕ್ಷಣ ಕಣ್ಣಿಗೆ ಬರುವಂಥದ್ದು ನಮ್ಮ ದೇಶದ ಗಡಿ ಕಾಯುವ ಸೈನ್ಯ.
ಆದರೆ ಸುಮಾರು 133 ಕೋಟಿ ಜನಸಂಖ್ಯೆ ಇರುವ ಈ ದೇಶದ ಆಂತರಿಕ ಭದ್ರತೆಯನ್ನು ಕಾಪಾಡಬೇಕಾದ, ಸಾರ್ವಜನಿಕರ ಮಾನ, ಪ್ರಾಣ, ಸ್ವತ್ತನ್ನು ಕಾಪಾಡಬೇಕಾದ, ಕಾಯಿದೆ ಕಾನೂನುಗಳಿಂದ ಸಮಾಜಘಾತುಕರನ್ನು ಸರಿದಾರಿಗೆ ತರುವಂತಹ ಮಹತ್ತರವಾದ ಹೊಣೆಗಾರಿಕೆಯನ್ನು ನಿಭಾಯಿಸುವವರು ಪೆÇಲೀಸರು ಎಂದು ತಿಳಿಸಿದರು.
ಗಡಿಕಾಯುವ ಸೈನಿಕರು ಎಷ್ಟು ಕಷ್ಟಪಡುತ್ತಾರೋ ಹಾಗೆಯೇ ದಿನದ 24 ಗಂಟೆ ಜನರ ರಕ್ಷಣೆಗಾಗಿ ಕಣ್ಗಾವಲಾಗಿ ನಿಲ್ಲುವವರು, ತಮ್ಮನ್ನು ತಾವು ಒಮ್ಮೊಮ್ಮೆ ಆಹುತಿ ನೀಡುವ ವ್ಯಕ್ತಿಗಳು ನಮ್ಮ ಆಂತರಿಕ ಭದ್ರತೆಯ ಪೊಲೀಸ್ ಸಿಬ್ಬಂದಿ ಎಂದು ಶ್ಲಾಘಿಸಿದರು.
ಹಾಗಾಗಿ ಪೊಲೀಸರ ಹೊಣೆಗಾರಿಕೆ ಎಷ್ಟಿದೆ ಎಂಬುದನ್ನು ವಿವರಿಸಬೇಕಾಗಿಲ್ಲ ಎಂದು ತಿಳಿಸಿದರು.
ನಮ್ಮ ರಾಷ್ಟ್ರಧ್ವಜ ಮತ್ತು ಪೊಲೀಸ್ ಧ್ವಜ ಎರಡೂ ಕೂಡ ಕೇವಲ ಬಟ್ಟೆಯ ಚೂರಲ್ಲ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಯಾರೆಲ್ಲ ಹೋರಾಟ ಮಾಡಿದರು. ಯಾರೆಲ್ಲ ಪ್ರಾಣ ತ್ಯಾಗ ಮಾಡಿದರು, ಮನೆಮಠಗಳನ್ನು ಕಳೆದುಕೊಂಡರು ಅವರ ತ್ಯಾಗದಿಂದ ನಾವು ಗಳಿಸಿದ ಸ್ವಾತಂತ್ರ್ಯದ ಪವಿತ್ರ ಧ್ವಜಗಳಿವು ಎಂದು ಹೇಳಿದರು.
ಆ ಧ್ವಜಗಳಲ್ಲಿ ದೇಶದ ಮಣ್ಣಿನ ಒಂದೊಂದು ಕಣವೂ ಕೂಡ ಪವಿತ್ರ ಎಂಬ ಭಾವನೆ ಅಡಗಿದೆ,ತ್ಯಾಗದ ಸಂದೇಶ ಅಡಗಿದೆ,ಇದರ ಹಿನ್ನಲೆಯಲ್ಲಿ ನಾವೆಲ್ಲ ರಾಷ್ಟ್ರಕಟ್ಟಲು ಬದುಕಬೇಕಾಗಿದೆ ಎಂದು ಗೃಹ ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಹರಿಶೇಖರನ್, ಪೊಲೀಸ್ ಮಹಾನಿರೀಕ್ಷಕ ವಿಫುಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಅಕಾಡೆಮಿಯ ಪ್ರಾಂಶುಪಾಲರಾದ ಡಾ.ಧರಣಿದೇವಿ ಮತ್ತಿತರರು ಉಪಸ್ಥಿತರಿದ್ದರು.

