ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲೂ ಕಾಂಗ್ರೆಸ್ ಅನ್ನು ಶಾಶ್ವತ ನಿದ್ರೆಗೆ ಕಳುಹಿಸಲು ಜನ ಸಿದ್ದರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಜನರ ದಿಕ್ಕು ತಪ್ಪಿಸಲು ಅಹೋರಾತ್ರಿ ನಿದ್ರಾ ಧರಣಿಯ ಮೂಲಕ ಕಾಂಗ್ರೆಸ್ ಅನಗತ್ಯ ಕೆಲಸಕ್ಕೆ ಕೈ ಹಾಕಿದೆ ಎಂದು ಅವರು ಟ್ವಿಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್‍ಗೆ ಈಗ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲು ಯಾವುದೇ ವಿಷಯ ಇಲ್ಲ.ಅವರು ಯಾವ ವಿಷಯದ ಬಗ್ಗೆ ಹೋರಾಟ ಮಾಡುತ್ತಿದ್ದಾರೆ ಎಂಬುದನ್ನು ನಾಗರಿಕರು ಗಮನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿವಾದವೇ ಇಲ್ಲದ ವಿಷಯಗಳಿಗೆ ಸದನದಲ್ಲಿ ಮಲಗುವುದರಿಂದ ರಾಜ್ಯದ ಜನತೆಗೆ ಏನು ಪ್ರಯೋಜನವಾಗುತ್ತೆ ಎನ್ನುವುದಕ್ಕೆ ಕಾಂಗ್ರೆಸ್ ಮುಖಂಡರ ಬಳಿ ಉತ್ತರ ಇಲ್ಲ. ಕಾಂಗ್ರೆಸ್ ಬೌದ್ಧಿಕ ದಿವಾಳಿಯಾಗಿರುವುದಕ್ಕೆ ಇದು ಸಾಕ್ಷಿ.
ಸದನದಲ್ಲಿ ಆರೋಗ್ಯಪೂರ್ಣ ಚರ್ಚೆಯಿಂದ ಪಲಾಯನವಾದ ಮಾಡುವ ಕಾಂಗ್ರೆಸ್ ನವರಿಗೆ ರಾಜ್ಯದ ಅಭಿವೃದ್ಧಿಗಿಂತ ತಮ್ಮ ಸ್ವಪ್ರತಿಷ್ಟೆ ಮುಖ್ಯವಾಗಿದೆ ಎಂದು ಟೀಕಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಯಶಸ್ವಿ ಕ್ರಮಗಳು, ಅಭಿವೃದ್ಧಿ ಯೋಜನೆಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಮುಖಂಡರು ವಿಷಯಾಂತರ ಮಾಡಲು ಧರಣಿಯ ನಾಟಕಕ್ಕೆ ಕೈ ಹಾಕಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರನ್ನು ಆರಿಸಿ ಕಳುಹಿಸಿದ ಮತದಾರರು ಇವರ ಬೇಜವಾಬ್ದಾರಿ ನಡೆಯಿಂದ ಭ್ರಮನಿರಸನಗೊಂಡಿದ್ದಾರೆ.
ಕಾಂಗ್ರೆಸ್ ಜನರ ಪರವಾಗಿರದೇ, ಸದನದ ಕಲಾಪಗಳಿಗೆ ಅಡ್ಡಿ ಮಾಡುವ ಮೂಲಕ ಜನರಿಗೆ ಅನ್ಯಾಯ ಎಸಗಿದೆ ಎಂದು ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

