ಸ್ಯಾಂಡಲ್ ವುಡ್ ಗೆ ಬಿ.ಎಸ್ ಯಡಿಯೂರಪ್ಪ ಎಂಟ್ರಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ‌ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಇದೇನೆಂದು ಅಚ್ಚರಿಯೇ.. ಹೌದು ಇದು ಖಂಡಿತಾ ಸತ್ಯ.

ತನುಜಾ  ಚಿತ್ರಕ್ಕೆ ಮೊಟ್ಟಮೊದಲ ಬಾರಿಗೆ ಬಣ್ಣ ಹಚ್ಚಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.

ಈ ಹಿಂದೆ ಬಿ ಎಸ್ ವೈ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತನುಜಾ ಎಂಬ ಹೆಣ್ಣುಮಗಳು ಕೋವಿಡ್ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಳು.

ಆ  ಸಂದರ್ಭದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಸಹಕಾರದಿಂದ ಆ ಬಾಲಕಿ ಪರೀಕ್ಷೆ ಬರೆದು ನೀಟ್ ಪಾಸಾಗಿದ್ದು  ಇಡೀ ದೇಶದ ಗಮನ ಸೆಳೆದಿತ್ತು.

ತನುಜಾ ಸುಮಾರು 350 ಕಿಲೋಮೀಟರ್ ದೂರ ಪ್ರಯಾಣ ಮಾಡಿ ಬಂದು ಪರೀಕ್ಷೆ ಬರೆದಿದ್ದೇ ರೋಚಕತೆಯಿಂದ ಕೂಡಿತ್ತು. ಜತೆಗೆ ಎಲ್ಲರ ಕುತೂಹಲ ಕೆರಳಿಸಿತ್ತು.

ಇದನ್ನೇ ಒನ್ ಲೈನ್ ಸ್ಟೋರಿ  ಮಾಡಿಕೊಂಡು ಸಾಮಾಜಿಕ ಕಳಕಳಿಯುಳ್ಳ ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ  ಹಳ್ಳಿಯವರು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ಇದೀಗ ಮಾಜಿ ಸಿಎಂ‌ ಯಡಿಯೂರಪ್ಪ ಆಗಮನದಿಂದ ಚಿತ್ರತಂಡಕ್ಕೆ  ದೊಡ್ಡ ಗೆಲುವಾಗಿದ್ದು ಬಹಳ ಖುಷಿ ಯಾಗಿದ್ದಾರೆ.

ಖುದ್ದು ಯಡಿಯೂರಪ್ಪನವರು ಅವರ ಪಾತ್ರಕ್ಕೆ ಬಣ್ಣಹಚ್ಚಿದ್ದು ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸುತ್ತಿದೆ.

ಭಾನುವಾರ ಮೊದಲ ದಿನ ಅವರ ಭಾಗದ ಚಿತ್ರೀಕರಣ ಯಶಸ್ವಿಯಾಗಿ ನಡೆದಿದ್ದು ಬಿ ಎಸ್ ವೈ ಅತ್ಯದ್ಭುತವಾಗಿ ನಟಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ಯಡಿಯೂರಪ್ಪನವರನ್ನು ವಿಧಾನಸೌಧದ ಒಳಗೆ ಮತ್ತು ಹೊರಗೆ ಹೋರಾಟದ ಮುಖವನ್ನ ಕಂಡಿರುವ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅವರು ಚಿತ್ರದಲ್ಲಿ ಹೇಗೆ ಕಾಣಿಸುತ್ತಾರೋ, ಅವರ ಪಾತ್ರ ಹೇಗಿರಲಿದೆಯೋ ಎಂಬ ಕುತೂಹಲ ವ್ಯಕ್ತಪಡಿಸಿದ್ದು ಇದಕ್ಕೆ ಉತ್ತರವನ್ನು  ಸದ್ಯದಲ್ಲೇ ತನುಜ ಚಿತ್ರ ನೀಡಲಿದೆ.