ಬೆಂಗಳೂರು: ಹಿಜಬ್ ವಿಷಯದಲ್ಲಿ ಸರ್ಕಾರ ಎಸ್ ಡಿಪಿಐ ಜೊತೆ ಸೇರಿ ರಾಜ್ಯದಲ್ಲಿ ಅಶಾಂತಿಯ ಬೀಜ ಬಿತ್ತಲು ಹುನ್ನಾರ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಹಿಜಬ್ ವಿಷಯದಲ್ಲಿ ಹೈಕೋರ್ಟ್ ಆದೇಶಕ್ಕೆ ಸೀಮಿತವಾಗಿ ಸರ್ಕಾರ ನಡೆದುಕೊಳ್ಳಬೇಕಿತ್ತು ಆದರೆ ಹಾಗೆ ಮಾಡಿಲ್ಲ ಎಂದರು.
ಶಾಲಾ ಕಾಲೇಜು, ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳಿಗೆ ಹಿಜಾಬ್ ವಿಷಯವನ್ನು ಬಿಟ್ಟು ಬಿಡುವ ಬದಲು ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಎಸ್ ಡಿಪಿಐ ಜೊತೆ ಸೇರಿ ಸರ್ಕಾರವೇ ಅಶಾಂತಿಯ ಬೀಜ ಬಿತ್ತುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ರೈತರ ಮೇಲೆ, ವಿದ್ಯಾರ್ಥಿಗಳ ಮೇಲೆ ಕೇಸು ಹಾಕಲಾಗುತ್ತಿದೆ. ಸರ್ಕಾರಕ್ಕೆ ಇದು ಕೊನೆಗಾಲ. ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದು ಅಕ್ಷಮ್ಯ, ಈ ವಿಷಯ ದೊಡ್ಡ ಚಳವಳಿಯಾಗಿ ಹುಟ್ಟಿಕೊಳ್ಳುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಚಿವ ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಿ ನಾವು ವಿಧಾನಮಂಡಲದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನಿನ್ನೆ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ವಿಧಾನಸಭೆಗೆ ಬಂದು ಧರಣಿ ನಿರತ ಎಲ್ಲಾ ಶಾಸಕರನ್ನು ಭೇಟಿ ಮಾಡಿ, ಬೆಂಬಲ ವ್ಯಕ್ತ ಪಡಿಸಿದರು ಎಂದು ಹೇಳಿದರು.
ರಾಷ್ಟ್ರಧ್ವಜ ನಮ್ಮ ಹೆಮ್ಮೆಯಾಗಿದೆ. ಅದನ್ನೇ ಬದಲಾವಣೆ ಮಾಡುತ್ತೇವೆ, ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಸಚಿವರೇ ಹೇಳಿಕೆ ನೀಡಿದ್ದು ಸರಿಯಲ್ಲ. ವಿದೇಶದಲ್ಲೂ ರಾಷ್ಟ್ರಧ್ವಜ ನಮಗೆ ಗೌರವದ ಬದುಕುಕೊಟ್ಟಿದೆ. ಸಚಿವರ ಹೇಳಿಕೆಯಿಂದ ದೇಶಕ್ಕೆ ಮತ್ತು ಧ್ವಜಕ್ಕೆ ಅವಮಾನವಾಗಿದೆ ಎಂದು ಡಿಕೆಶಿ ತಿಳಿಸಿದರು.
ಬಿಜೆಪಿ ನಾಯಕರ ಹೇಳಿಕೆಗಳು ಹಾಗೂ ನಡವಳಿಕೆಗಳ ಬಗ್ಗೆ ಈಗಾಗಲೇ ಸಿಂಗಪೂರ್ ಹಾಗೂ ಸೌದಿ ಪ್ರಧಾನಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಕೆನಡಾ ಪ್ರಧಾನಿಯೂ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮರ್ಯಾದೆ ಹರಾಜಾಗುತ್ತಿದೆ ಎಂದು ಆಕ್ಷೇಪಿಸಿದರು.
ಹರಕಲು-ಬಚ್ಚಲು ಬಾಯಿ ವ್ಯಕ್ತಿ ಏನಾದರೂ ಮಾತನಾಡಲಿ. ಅದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಳ್ಳುತ್ತಿರುವುದು ದರುಂತ ಎಂದರು.
ಈಶ್ವರಪ್ಪ ಯಾರಿಗೂ ನಿಷ್ಠರಲ್ಲ. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದುಕೊಂಡು ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಮುರುಗೇಶ್ ನಿರಾಣಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿಕೆ ನೀಡುತ್ತಾರೆ.
ಅಂದೇ ಅವರನ್ನು ಸಂಪುಟದಿಂದ ವಜಾ ಮಾಡಬೇಕಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲೂ ಸಚಿವರಾಗಿದ್ದುಕೊಂಡು ರಾಜ್ಯಪಾಲರಿಗೆ ಯಡಿಯೂರಪ್ಪ ಅವರ ವಿರುದ್ಧ ದೂರು ನೀಡಿದ್ದರು. ಅವರ ಪಕ್ಷಕ್ಕೆ, ನಾಯಕರಿಗೆ ಈಶ್ವರಪ್ಪ ನಿಷ್ಠರಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಈಶ್ವರಪ್ಪನನ್ನು ಸಂಪುಟದಿಂದ ವಜಾ ಮಾಡದಿದ್ದರೆ ಇಟ್ಟುಕೊಳ್ಳಲಿ.ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ, ತಾಲ್ಲೂಕುಗಳ ತಹಸೀಲ್ದಾರಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತಾರೆ. ನಾವು ವಿಧಾನಸೌಧದ ಒಳಗೆ ಹೋರಾಟ ಮುಂದುವರೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಈಶ್ವರಪ್ಪರನ್ನು ಸಂಪುಟದಿಂದ ವಜಾಗೊಳಿಸಿ, ಕ್ರಮ ಕೈಗೊಳ್ಳುವವರೆಗು ನಮ್ಮ ಹೋರಾಟ ನಿರಂತರ. ಅಧಿವೇಶನ ಮುಂದೂಡಲಿ, ಮತ್ತಷ್ಟು ದಿನ ನಡೆಸಲಿ ಆವರೆಗೂ ನಾವು ಪ್ರತಿಭಟನೆ ನಡೆಸುತ್ತಲೇ ಇರುತ್ತೇವೆ ಎಂದರು.
ದಲಿತರ ಬೃಹತ್ ಪ್ರತಿಭಟನೆಯನ್ನು ನಾನು ಅಭಿನಂದಿಸುತ್ತೇನೆ ಎಂದರಲ್ಲದೆ, ಸರ್ಕಾರ ಅಂಬೇಡ್ಕರ್‍ಗೆ ಅಪಮಾನ ಮಾಡಿದ ನ್ಯಾಯಾಧೀಶರ ವಿರುದ್ಧ ಕ್ರಮ ಜರುಗಿಸಲು ಕಾನೂನು ಸಚಿವಾಲಯದಿಂದ ಹೈಕೋರ್ಟ್ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಬೇಕಿತ್ತು ಎಂದು ಡಿಕೆಶಿ ವ್ಯಂಗ್ಯ ವಾಡಿದರು.

