ಕಾಂಗ್ರೆಸ್ ಶಾಸಕರ ಧರಣಿಗೆ ವಿಶ್ವನಾಥ್ ಕಿಡಿ

ಮೈಸೂರು: ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್  ಶಾಸಕರು ನಡೆಸುತ್ತಿರುವ ಧರಣಿಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ನೀಡಿರುವ ಹೇಳಿಕೆಯ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಯಾವ ಅರ್ಥದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಮೊದಲು ತೋರಿಸಲಿ. ಆಮೇಲೆ ಉಳಿದಿದ್ದು ಚರ್ಚೆ ಆಗಲಿ ಎಂದು ಹೇಳಿದರು.

ಒಂದು ಹೇಳಿಕೆ ಹಿಡಿದುಕೊಂಡು ಕಾಂಗ್ರೆಸ್ ಸದನದ ಸಮಯ ಹಾಳುಮಾಡುತ್ತಿರುವುದು ತಪ್ಪು. ಸಿದ್ದರಾಮಯ್ಯ ನಂತಹ ಹಿರಿಯರು ಇಂತಹ ನಡುವಳಿಕೆ ಪ್ರದರ್ಶಿಸ ಬಾರದಿತ್ತು ಎಂದು ಹೇಳಿದರು.

ಸದನದ ಒಳಗಡೆ ತಪ್ಪುಗಳು ಆಗುತ್ತಿರುತ್ತವೆ. ಅದಕ್ಕೆ ಕ್ಷಮೆ ಕೇಳಿ ಮುಂದುವರೆದಿರುವ ಅನೇಕ ಉದಾಹರಣೆಗಳಿವೆ. ಈಗಲೂ ಅಂತಹ ನಡವಳಿಕೆಗಳು ಪ್ರದರ್ಶನವಾಗಬೇಕು ಎಂದು ವಿಶ್ವನಾಥ್ ಸಲಹೆ ನೀಡಿದರು.

ಮುಖ್ಯಮಂತ್ರಿಗಳು, ಎರಡೂ ಸದನಗಳ ನಾಯಕರು ಹಾಗೂ ಸ್ಪೀಕರ್ ಗಳು ತುರ್ತಾಗಿ ಸಭೆ ನಡೆಸಬೇಕು. ಈ ಮೂಲಕ ಜನರ ಸಮಸ್ಯೆಗಳ ಚರ್ಚೆಗೆ ಸದನದಲ್ಲಿ ಅವಕಾಶ ನೀಡಬೇಕು ಎಂದು ತಿಳಿಸಿದರು.

ಮುಂದೆ ಚುನಾವಣೆ ಇರುವುದರಿಂದ ಓಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ನವರು ಈ ರೀತಿ ಮಾಡ್ತಿದ್ದಾರೆ. ಪ್ರತಿಭಟನೆ ಯಾವುದಕ್ಕೂ ಪರಿಹಾರ ಅಲ್ಲ ಎಂದು  ತಿಳಿಸಿದರು.