ಭಜರಂಗದಳದ ಕಾರ್ಯಕರ್ತನ ಕೊಲೆ ಆರೋಪಿಗಳ ಸುಳಿವು ಸಿಕ್ಕಿದೆ -ಗೃಹ ಸಚಿವ

ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ಹರ್ಷನನ್ನು ಹತ್ಯೆ ಮಾಡಿದ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿಸಿದರು.

ಪ್ರಾಥಮಿಕ ಮಾಹಿತಿ ಪ್ರಕಾರ 4ರಿಂದ 5 ಮಂದಿ ಈ ದುಷ್ಕೃತ್ಯ ನಡೆಸಿರುವ ಸಾಧ್ಯತೆ ಇದೆ. ನಮಗೆ ಮಾಹಿತಿ ಲಭ್ಯವಾಗಿದ್ದು, ಸದ್ಯದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ತಿಳಿಸಿದರು.

ಹಿಜಾಬ್ ವಿವಾದಕ್ಕೂ ಹಿಂದೂ ಕಾರ್ಯಕರ್ತ ಹರ್ಷನ ಕೊಲೆಗೂ ಸಂಬಂಧವಿದೆ ಎಂದು ಹೇಳಲಾಗುವುದಿಲ್ಲ. ಕೊಲೆ ಆರೋಪಿಗಳ ಸುಳಿವು ಸಿಕ್ಕಿದೆ ತನಿಖೆ ಹಂತದಲ್ಲಿರುವುದರಿಂದ ಯಾರೆಂದು ತಿಳಿಸಲಾಗುವುದಿಲ್ಲ ಎಂದು ಆರಗ ಹೇಳಿದರು.

ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಹಿರಿಯ ಪೊಲೀಸ್ ಅಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾರೇ ಆಗಲಿ ಇಂತಹ ಹೀನ ಕೃತ್ಯ ಎಸಗಬಾರದು. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಜನರು ಉದ್ವೇಗಕ್ಕೆ ಒಳಗಾಗಬಾರದು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಶಿವಮೊಗ್ಗದಲ್ಲಿ ಇಂತಹ ದುರದೃಷ್ಟಕರ ಘಟನೆಯಾಗಿರುವುದನ್ನು ಖಂಡಿಸುತ್ತೇನೆ. ಈ ಪ್ರಕರಣದಲ್ಲಿ ಸ್ಪಷ್ಟವಾದ ಸಂದೇಶವನ್ನು ಸರ್ಕಾರ, ಪೊಲೀಸ್ ಇಲಾಖೆ ನೀಡಲಿದೆ ಎಂದರು.

ಇಂತಹ ಘಟನೆಯಲ್ಲಿ ಮಾನಸಿಕವಾಗಿ ಭಾವುಕರಾಗುವುದು ಸಹಜ, ತಾಳ್ಮೆ ಕಳೆದುಕೊಳ್ಳುವುದು ಬೇಡ, ಒಳ್ಳೆಯ ಸಾಮಾಜಿಕ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಜನರು ಸಹಕಾರ ನೀಡಬೇಕು. ಪೆಪೊಲೀಸರ ಜೊತೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

ಹರ್ಷನ ಕೊಲೆಗೆ ಕಾರಣ ತನಿಖೆಯಿಂದ ಹೊರಬರಬೇಕಿದೆ. ಆತ ಆರ್‍ಎಸ್‍ಎಸ್ ಕಾರ್ಯಕರ್ತ. ಆತನ ಮೇಲೆ ಕೂಡ ಒಂದೆರಡು ಪ್ರಕರಣಗಳಿದ್ದವು ಎಂಬ ಮಾಹಿತಿ ಗೊತ್ತಾಗಿದೆ ಆದರೆ ಸ್ಪಷ್ಟತೆ ಇಲ್ಲ ಎಂದು ಹೇಳಿದರು.

ಹರ್ಷನ ಮೇಲೆ ಈ ಹಿಂದೆಯೂ ದಾಳಿಯಾಗಿತ್ತು ಎಂಬ ಮಾಹಿತಿಯಿದೆ. ಪೊಲೀಸರನ್ನು ಅಲರ್ಟ್ ಮಾಡಿದ್ದೇವೆ, ಗಾಂಜಾ, ಮಾದಕ ವಸ್ತುವನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ, ನಂತರ ಒಂದೊಂದಾಗಿ ಮಾಹಿತಿ ಲಭ್ಯವಾಗಲಿವೆ ಎಂದರು.

ಮೃತ ಯುವಕ ಹರ್ಷನ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಯವರೊಂದಿಗೆ ಮಾತನಾಡಿ ಘೋಷಣೆ ಮಾಡುತ್ತೇನೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.