ಬೆಂಗಳೂರು: ಶಿವಮೊಗ್ಗದಲ್ಲಿ ಕಳೆದ ರಾತ್ರಿ ನಡೆದ ಭಜರಂಗದಳದ ಕಾರ್ಯಕರ್ತನ ಕೊಲೆಯ ಹಿಂದೆ ಮುಸ್ಲಿಂ ಗೂಂಡಾಗಳ ಕೈವಾಡವಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಇದುವರೆಗೆ ಶಿವಮೊಗ್ಗದಲ್ಲಿ ಗೂಂಡಾಗಳು ಬಾಲ ಬಿಚ್ಚಿರಲಿಲ್ಲ. ಮೊದಲ ಬಾರಿಗೆ ಇಂತಹ ದುರ್ಘಟನೆ ನಡೆದಿದೆ. ಇದರಲ್ಲಿ ಮುಸ್ಲಿಂ ಗೂಂಡಾಗಳ ಕೈವಾಡವಿದೆ ಎಂದು ದೂರಿದರು.
ನಮ್ಮ ಸಜ್ಜನ ಕಾರ್ಯಕರ್ತನ ಕೊಲೆಗೆ ಯಾರೇ ಕಾರಣರಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರಚೋದನಕಾರಿ ಹೇಳಿಕೆಗಳಿಂದಲೇ ಈ ಗೂಂಡಾಗಳಿಗೆ ಕುಮ್ಮಕ್ಕು ಸಿಕ್ಕಿದೆ, ನಮ್ಮ ಕಾರ್ಯಕರ್ತರನ್ನು ಮುಟ್ಟಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದರು
ಪ್ರಕರಣ ಕುರಿತಂತೆ ಸರ್ಕಾರ ತನಿಖೆ ಮಾಡುತ್ತಿದೆ. ನಾನು ತಕ್ಷಣವೇ ಶಿವಮೊಗ್ಗಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತೇನೆ ಎಂದು ಈಶ್ವರಪ್ಪ ತಿಳಿಸಿದರು.
ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ಕೊಡಲಾಗಿದೆ. ಜನತೆ ಶಾಂತಿ ಕಾಪಾಡಬೇಕು ಎಂದು ಈಶ್ವರಪ್ಪ ಮನವಿ ಮಾಡಿದರು.
ಕೊಲೆಗೀಡಾದ ಹರ್ಷ ಪ್ರಾಮಾಣಿಕ ಕಾರ್ಯಕರ್ತನಾಗಿದ್ದ. ಈ ಘಟನೆ ನಡೆದಿರುವುದು ವೈಯಕ್ತಿಕವಾಗಿ ನನಗೆ ತುಂಬ ನೋವು ತಂದಿದೆ. ಶಿವಮೊಗ್ಗದಲ್ಲಿ ಗೂಂಡಾಗಿರಿ ಬೆಳೆಯಲು ಬಿಡಲ್ಲ. ದಮನ ಮಾಡಿಯೇ ತೀರುತ್ತೇವೆ ಎಂದು ಈಶು ಗುಡುಗಿದರು.
ಇದರ ಬಗ್ಗೆ ಸಿಎಂ ಮತ್ತು ಗೃಹಸಚಿವರ ಜೊತೆ ಮಾತನಾಡಿದ್ದೇನೆ ಎಂದರು.
ಡಿ.ಕೆ.ಶಿವಕುಮಾರ್ ಧ್ವಜದ ವಿಚಾರದಲ್ಲಿ ಪ್ರಚೋದನಾ ಹೇಳಿಕೆ ನೀಡಿದ್ದು ಹಾಗೂ ಸೂರತ್‍ನಿಂದ ಕೇಸರಿ ಶಾಲು ತರಿಸಿದ್ದಾಗಿ ನೀಡಿದ ಹೇಳಿಕೆಯಿಂದ ಪ್ರೇರಣೆ ಪಡೆದು ಮುಸ್ಲಿಂ ಗೂಂಡಾಗಳು ನಮ್ಮ ಕಾರ್ಯಕರ್ತ ಹರ್ಷನ ಕೊಲೆ ಮಾಡಿದ್ದಾರೆ ಎಂದು ಈಶು ದೂರಿದರು.

