ಕೊಲೆಗಾರರು ಯಾವ ಸಂಘಟನೆಯವರಾಗಲಿ ಗಲ್ಲು ಶಿಕ್ಷೆಯಾಗಲಿ: ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆಪರಾಧಿಗಳು ಯಾವುದೇ ಸಂಘಟನೆಗೆ ಸೇರಿದ್ದರೂ ಅವರನ್ನು ಸರ್ಕಾರ ಬಂಧಿಸಿ ಗಲ್ಲು ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಿ ಎಂದು  ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ವಿಧಾನಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

ಈ ಘಟನೆಯನ್ನು ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸ್ಪಷ್ಟವಾಗುತ್ತದೆ. ಗೃಹ ಸಚಿವರ ಸ್ವಂತ ಜಿಲ್ಲೆಯಲ್ಲಿಯೇ ಕೊಲೆ ನಡೆದಿದೆ. ಹೀಗಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಲೇ ರಾಜಿನಾಮೆ ನೀಡಬೇಕು ಎಂದು  ಆಗ್ರಹಿಸಿದರು.

ಹತ್ಯೆಯನ್ನು ನಾವು ಖಂಡಿಸುತ್ತೇವೆ ಆರೋಪಿಗಳು ಯಾವುದೇ ಸಮುದಾಯ, ಸಂಘಟನೆಗೆ ಸೇರಿದ್ದರೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈಶ್ವರಪ್ಪ, ಯುಡಿಯೂರಪ್ಪ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜಿಲ್ಲೆ ಇದು. ಇದು ಏನನ್ನು ಸೂಚಿಸುತ್ತದೆ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹಾಳಾಗಿರುವುದಕ್ಕೆ ಇದು ಉದಾಹರಣೆ ಎಂದು ಸಿದ್ದು ಹೇಳಿದರು.

ಬೆಂಗಳೂರಿನಲ್ಲಿ ಕುಳಿತು ಕಾಂಗ್ರೆಸ್ ಅಥವಾ ಯಾರ ಮೇಲೋ ಆರೋಪ ಮಾಡುವುದಲ್ಲ. ಆರೋಪಿಗಳು ಯಾರೇ ಆಗಿದ್ದರೂ ಬಂಧಿಸಿ ಶಿಕ್ಷೆಗೆ ಒಳಪಡಿಸಲಿ.

ನಮ್ಮ ಸರ್ಕಾರ ಇದ್ದಾಗ ಕೆ.ಜೆ. ಜಾರ್ಜ್ ಅವರು ರಾಜಿನಾಮೆ ಕೊಟ್ಟಿದ್ದರು. ಈಗ ಗೃಹ ಸಚಿವರು ರಾಜಿನಾಮೆ ಕೊಡುವುದೇ ಇಲ್ಲ ಎಂದು ಹೇಳಿದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.