ಬೆಂಗಳೂರು: ನಾವು ರಾಷ್ಟ್ರಧ್ವಜ ವಿಚಾರವಾಗಿ ಹೋರಾಟ ನಡೆಸುವಾಗಲೇ ಶಿವಮೊಗ್ಗದಲ್ಲಿ ಕೊಲೆ ನಡೆದಿದ್ದು ಈ ಹತ್ಯೆಯನ್ನು ನಾವು ಖಂಡಿಸುತ್ತೇವೆ.ಕೃತ್ಯ ಎಸಗಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ವಿಧಾನ ಸೌಧದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ಈ ವಿಚಾರದಲ್ಲಿ ರಾಜಕೀಯ ಹೇಳಿಕೆಯನ್ನು ನಾನು ನೀಡುವುದಿಲ್ಲ. ಈಶ್ವರಪ್ಪ ನನ್ನ ವಿರುದ್ಧ ಹೇಳಿಕೆ ನೀಡುತ್ತಿರಬಹುದು. ನನ್ನ ವಿರುದ್ಧ ಮಾತನಾಡದಿದ್ದರೆ ಅವರ ಪಕ್ಷದಲ್ಲಿ ಅವರಿಗೆ ಸ್ಥಾನ ಸಿಗುವುದಿಲ್ಲ ಎಂದು ಅರಿತು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯ ವಾಡಿದರು.
ಮೊದಲು ಅವರ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಿಸಿ, ಬಂಧಿಸಬೇಕು. ಅವರನ್ನು ವಜಾ ಮಾಡಿದರೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತದೆ ಎಂದು ಹೇಳಿದರು.
ಈ ಸರ್ಕಾರ ಈಶ್ವರಪ್ಪ ಅವರನ್ನು ಎಷ್ಟು ದಿನಗಳ ಕಾಲ ರಕ್ಷಣೆ ಮಾಡಿಕೊಂಡು ಇರುತ್ತದೆಯೋ ಅಲ್ಲಿಯವರೆಗೂ ಇಂತಹ ಪರಿಸ್ಥಿತಿ ಮುಂದುವರಿಯಲಿದೆ ಎಂದು ಡಿಕೆಶಿ ಅಭಿಪ್ರಾಯ ಪಟ್ಟರು.
ವೈಯಕ್ತಿಕ ಗಲಾಟೆಗಳಿಂದ ಶಿವಮೊಗ್ಗದಲ್ಲಿ ಹತ್ಯೆ ನಡೆದಿದೆ ಎಂದು ಮಾಧ್ಯಮಗಳು ಮಾಹಿತಿ ನೀಡುತ್ತಿದ್ದು, ಇಂತಹ ಕೃತ್ಯ ನಡೆಯಬಾರದು.
ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ಹತ್ಯೆಯನ್ನು ಯಾರೇ ಮಾಡಿದ್ದರೂ ಅವರನ್ನು ಶಿಕ್ಷೆಗೆ ಒಳಪಡಿಸಬೇಕು. ಮೃತರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯಿಂದಲೇ ಇಂತಹ ಘಟನೆ ನಡೆಯುತ್ತಿದೆ ಎಂಬ ಈಶ್ವರಪ್ಪ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ನಮಗೂ ಈ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ತಪ್ಪು ಮಾಡಿದ್ದರೆ ನನ್ನ ವಿರುದ್ಧ ಪ್ರಕರಣ ದಾಖಲಿಸಲಿ ಎಂದು ಸವಾಲು ಹಾಕಿದರು.
ಸಚಿವರು, ಸರ್ಕಾರ, ಪೊಲೀಸ್ ಅಧಿಕಾರಿಗಳು ಮುಕ್ತವಾಗಿ ನನ್ನ ವಿರುದ್ಧ ಕ್ರಮ ಕೈಗೊಳ್ಳಬಹುದು. ಇಂತಹ ವಿಚಾರದಲ್ಲಿ ನನ್ನನ್ನು ಕ್ಷಮಿಸಬಾರದು. ನನ್ನ ವಿರುದ್ಧ ಕ್ರಮ ಕೈಗೊಳ್ಳುವುದು ಅವರ ಕರ್ತವ್ಯ.
ದೇಶದ ಐಕ್ಯತೆ ಬಹಳ ಪ್ರಮುಖ. ನಾವು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ನಾವು ನಮ್ಮ ಇತಿಹಾಸ, ದೇಶದ ಗೌರವ, ಸಂವಿಧಾನ ರಕ್ಷಣೆಗೆ ಬದ್ಧವಾಗಿದ್ದೇವೆ ಎಂದು ಉತ್ತರಿಸಿದರು.
ಈ ಹತ್ಯೆಗೆ ಧಾರ್ಮಿಕ ಬಣ್ಣ ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಸಿದ್ದರಾಮಯ್ಯನವರು ಹೇಳಿರುವಂತೆ ಈಶ್ವರಪ್ಪನ ಮಿದುಳಿಗೂ ನಾಲಿಗೆಗೂ ಸಂಪರ್ಕವೇ ಇಲ್ಲ.
ಈ ಹತ್ಯೆ ಯಾಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡಬೇಕು. ಆದರೆ ಸಾಮಾನ್ಯ ಪರಿಜ್ಞಾನವೂ ಇಲ್ಲದೆ ಈಶ್ವರಪ್ಪ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಇಂತಹ ಹೇಳಿಕೆ ನೀಡುತ್ತಿರುವುದಕ್ಕೆ ಈಶ್ವರಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಲಿ. ಅವರು ದೇಶಕ್ಕೆ ತ್ಯಾಗ ಮಾಡಿರುವ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ. ಅವರು ಹಾಲಿನ ಅಭಿಷೇಕ ಅಲ್ಲ, ತುಪ್ಪದ ಅಭಿಷೇಕ ಮಾಡಿಸಿಕೊಳ್ಳಲಿ ಎಂದು ಶಿವಕುಮಾರ್ ಛೇಡಿಸಿದರು.
ಈ ಕೃತ್ಯವನ್ನು ನಿಮ್ಮ ವಿರುದ್ಧದ ವಾಗ್ದಾಳಿಗೆ ಬಳಸಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆಗೆ, ಅವರು ದಾಳಿ ಮಾಡಲಿ. ಅವರು ಸದಾ ನನ್ನ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ. ನನ್ನ ವಿರುದ್ಧ ದಾಳಿ ಮಾಡದಿದ್ದರೆ ಅವರಿಗೆ ರಾಜಕೀಯ ನೆಲೆ ಇರುವುದಿಲ್ಲ. ಹೀಗಾಗಿ ನನ್ನ ಹಾಗೂ ನಮ್ಮ ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಡಿಕೆಶಿ ಉತ್ತರಿಸಿದರು.

