ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಯುವಕನ ಕೊಲೆ ಅಮಾನವೀಯ, ಈ ಘಟನೆ ಹಿಂದೆ ಯಾರೇ ಇದ್ದರೂ ಅವರನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಇಂಥ ಘಟನೆಗಳು ಪದೇ ಪದೆ ನಡೆಯುತ್ತವೆ. ಇಂಥ ಘಟನೆಗಳ ಬೆಂಕಿಯಲ್ಲಿ ರಾಷ್ಟ್ರೀಯ ಪಕ್ಷಗಳು ಚಳಿ ಕಾಯಿಸಿಕೊಳ್ಳುತ್ತವೆ ಎಂದು ನಾನು ಮೊದಲೇ ಹೇಳಿದ್ದೆ ಎಂದು ಅವರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಂಥ ಘಟನೆಗಳು ನಡೆಯುತ್ತಿವೆ ಎನ್ನುವುದು ನನ್ನ ಅನುಮಾನ.
ರಾಷ್ಟ್ರೀಯ ಪಕ್ಷಗಳಿಗೆ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಜನರ ಬಳಿಗೆ ಹೋಗಲು ವಿಷಯ ಇಲ್ಲ. ಕೇವಲ ಭಾವನಾತ್ಮಕ ಅಂಶಗಳ ಮೂಲಕ ಹಿಂಸಾ ರಾಜಕಾರಣವನ್ನು ಮಾಡಲು ಎರಡೂ ಪಕ್ಷಗಳು ಹೊರಟಿವೆ ಎಂದು ಎಚ್ ಡಿ ಕೆ ವಾಗ್ದಾಳಿ ನಡೆಸಿದ್ದಾರೆ.
ಹತ್ಯೆಗೀಡಾದ ಯುವಕನಿಗೆ ಮೊದಲೇ ಜೀವ ಬೆದರಿಕೆ ಇತ್ತೆಂದು, ಪೊಲೀಸರಿಗೆ ದೂರು ಕೊಡಲಾಗಿತ್ತು ಎಂದು ಹೇಳುತ್ತಿದ್ದಾರೆ. ಹಾಗಾದರೆ ಆ ಯುವಕನಿಗೆ ರಕ್ಷಣೆ ಯಾಕೆ ಕೊಡಲಿಲ್ಲ ಇದಕ್ಕೆ ಉತ್ತರ ಬೇಕಿದೆ ಎಂದಿದ್ದಾರೆ.
ಜನರ ಸೂಕ್ಷ್ಮ ಭಾವನೆಗಳು ಹಾಗೂ ಸಮಾಜದ ಶಾಂತಿಯನ್ನು ಅಪಾಯಕ್ಕೆ ಒಡ್ಡಿ ಬೇಳೆ ಬೇಯಿಸಿಕೊಳ್ಳುತ್ತಿರುವ ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣಕ್ಕೆ ಕ್ಷಮೆಯೇ ಇಲ್ಲ.
ಈಗ ಒಂದು ಅಮೂಲ್ಯ ಪ್ರಾಣ ಹೋಗಿದೆ. ಅದಕ್ಕೆ ಯಾರು ಹೊಣೆ.ರಾಜಕಾರಣಿಗಳು ಮೂರು ದಿನ ಮೊಸಳೆ ಕಣ್ಣೀರು ಸುರಿಸಿ, ಹತ್ತು ಲಕ್ಷ ಪರಿಹಾರ ಕೊಟ್ಟರೆ ಸಾಕೇ ಇಂತಹ ಹಿಂಸಾ ಪ್ರವೃತ್ತಿಗೆ ಕೊನೆ ಯಾವಾಗ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

