ಯುವಕನ ಹತ್ಯೆ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆ -ಬೊಮ್ಮಾಯಿ

ಬೆಂಗಳೂರು: ಶಿವಮೊಗ್ಗದಲ್ಲಿ ಯುವಕನ ಹತ್ಯೆಯಾಗಿರುವ ಘಟನೆ ಸಂಬಂಧ ತನಿಖೆ ಪ್ರಾರಂಭವಾಗಿದ್ದು, ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಶಿಕ್ಷೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಭಾನುವಾರ ರಾತ್ರಿ ಹರ್ಷ ಎಂಬ ಕಾರ್ಯಕರ್ತನ ಕೊಲೆಯಾಗಿದೆ. ತನಿಖೆ ಪ್ರಾರಂಭವಾಗಿದೆ, ಹಲವು ಸುಳಿವುಗಳು ಸಿಕ್ಕಿವೆ. ಶೀಘ್ರದಲ್ಲೇ ಆರೋಪಿಗಳ ಬಂಧನವಾಗಲಿದೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ, ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ. ನ್ಯಾಯಯುತವಾಗಿ ಪ್ರಕರಣದ ತನಿಖೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.

ಯಾರೂ ಭಾವೋದ್ವೇಗಕ್ಕೆ ಒಳಗಾಗಬಾರದು. ಶಾಂತಿ ಕಾಪಾಡಬೇಕು. ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ತರ್ಕ ಬಿಟ್ಟು ಮಾತನಾಡುತ್ತಾರೆ. ತನಿಖೆಯ ನಂತರ ಎಲ್ಲ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಬೊಮ್ಮಾಯಿ‌ ಹೇಳಿದರು.