ಹರ್ಷ ಕೊಲೆ ಕೇಸನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ಶೋಭಾ ಕರಂದ್ಲಾಜೆ ಆಗ್ರಹ

ಬೆಂಗಳೂರು: ಶಿವಮೊಗ್ಗದಲ್ಲಿ ಹತ್ಯೆಯಾಗಿರುವ ಹರ್ಷ ಕೊಲೆ ಕೇಸನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಈ ಸಂಬಂಧ ಅವರು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಹರ್ಷ ಕೊಲೆ ಹಿಂದೆ ಷಡ್ಯಂತ್ರ ನಡೆದಿದೆ.ಇದರ  ಹಿಂದಿನ ಪಿತೂರಿಯನ್ನು ಭೇದಿಸಬೇಕು ಎಂದು ಹೇಳಿದ್ದಾರೆ.

ಹಿಂದೂ ಸಂಘಟನೆಯ ಯುವಕರನ್ನೇ ಗುರಿಯಾಗಿಸಿಕೊಂಡು ಕೃತ್ಯಗಳು ನಡೆಯುತ್ತಿವೆ.ಹಾಗಾಗಿ ಈ ಕೊಲೆ ಕೇಸನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾಯಿಸಬೇಕೆಂದು ಶೋಭಾ ಕರಂದ್ಲಾಜೆ ಮುಖ್ಯ ಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಯುವಕನ ಹತ್ಯೆ ಪ್ರಕರಣ: ಇಬ್ಬರ ಬಂಧನ

ಶಿವಮೊಗ್ಗ: ಶಿವಮೊಗ್ಗದಲ್ಲಿ ಭಾನುವಾರ ರಾತ್ರಿ ನಡೆದಿರುವ ಯುವಕನ ಹತ್ಯೆ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಮುರುಗನ್ ತಿಳಿಸಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ  ಮಾತನಾಡಿದ ಅವರು, ಯುವಕ ಹರ್ಷ ಎಂಬಾತನ ಕೊಲೆಯಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಮ್ಮ ಪೊಲೀಸರು ಅಲರ್ಟ್ ಆಗಿದ್ದಾರೆ ಎಂದು ಹೇಳಿದರು.

ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಬಲೆ ಬೀಸಲಾಗಿದೆ ಎಂದು ಹೇಳಿದರು.

ಜನತೆ ಶಾಂತಿ ಕಾಪಾಡಬೇಕು‌, ಸದಾ ನಿಮ್ಮ ಜತೆ ನಾವಿರುತ್ತೇವೆ, ಊಹಾಪೋಹದ ಸುದ್ದಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಮುರುಗನ್ ಮನವಿ ಮಾಡಿದರು.

ಶೀಘವೇ ಎಲ್ಲಾ ಕೊಲೆಗಾರರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.