ಹಿಜಾಬ್ ವಿಚಾರದಲ್ಲಿ ವಿದೇಶಿ ಶಕ್ತಿಗಳ ಕೈವಾಡವಿದೆ -ಅಶೋಕ್

ಬೆಂಗಳೂರು: ಹಿಜಾಬ್ ವಿಚಾರದಲ್ಲಿ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಹಿಜಾಬ್‍ಗಾಗಿ ಹೆಣ್ಣುಮಕ್ಕಳು ಪ್ರತಿಭಟನೆ ಮಾಡಿರುವುದು ಸ್ಥಳೀಯ ಮಾಧ್ಯಮಗಳಿಗಿಂತ ವಿದೇಶಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಯಾವುದೇ ದೇಶದ್ರೋಹಿಯನ್ನೂ ಬಿಡುವುದಿಲ್ಲ ಮಟ್ಟ ಹಾಕುತ್ತೇವೆ ಎಂದು ಗುಡುಗಿದರು.

ಶಿವಮೊಗ್ಗದಲ್ಲಿ ಯುವಕನ ಹತ್ಯೆ ಹಾಗೂ ಗಲಭೆಯಾಗಿರುವುದು ಗುಂಡಾಗಿರಿ‌ ನಡೆಯುತ್ತಿರುವುದು ನೋಡಿದರೆ ಎಸ್‍ ಡಿಪಿಐ, ಪಿಎಫ್‍ ಐನಂತಹ ಸಂಘಟನೆಗಳು ಕ್ರಿಯಾಶೀಲರಾಗಿರುವುದಕ್ಕೆ ನಿದರ್ಶನ ಎಂದು ಹೇಳಿದರು.

ಈ ಗಲಭೆಗೆ ಹಿಜಾಬ್ ಕಾರಣ ಎಂದು ಗೊತ್ತಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ಈಗಾಗಲೇ ಹಲವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಇದರಲ್ಲಿ ಪಿಎಫ್‍ಐ ಭಾಗಿಯಾಗಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಮುಖ್ಯಮಂತ್ರಿಯವರ ಜೊತೆ ಇದರ ಬಗ್ಗೆ ಸಮಾಲೋಚನೆ ನಡೆಸುತ್ತೇವೆ ಎಂದರು.

ಸಚಿವ ಈಶ್ವರಪ್ಪನವರ ವಿಚಾರ ಪ್ರಸ್ತಾಪವಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಪೊಲೀಸ್ ಎಂಬುದು ಸ್ವತಂತ್ರ ಸಂಸ್ಥೆ, ತನಿಖೆ ನಡೆಯುತ್ತಿದೆ. ಅಂತಿಮವಾಗಿ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಅಶೋಕ್ ತಿಳಿಸಿದರು.