ಬೆಂಗಳೂರು: ಸುಪ್ರೀಮ್ ಕೋರ್ಟ್ ಆದೇಶವನ್ನು ಜಿ. ಪಂ, ತಾ. ಪಂ ಚುನಾವಣೆಗಳನ್ನು ಮುಂದೂಡಲು ಸಿಕ್ಕಿದ ಪಿಳ್ಳೆ ನೆವ ಎಂದು ಪರಿಗಣಿಸದೆ ತಕ್ಷಣ ಹಿಂದುಳಿದ ಜಾತಿಗಳಿಗೆ ಆಗಲಿರುವ ರಾಜಕೀಯ ಅನ್ಯಾಯವನ್ನು ಸರಿಪಡಿಸಲು ಯುದ್ದೋಪಾದಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಕ್ಷಣ ವಿರೋಧಪಕ್ಷಗಳ ನಾಯಕರು ಮತ್ತು ಕಾನೂನು ತಜ್ಞರ ಸಭೆ ಕರೆದು ಚರ್ಚೆ ನಡೆಸಿ, ಸುಪ್ರೀಮ್ ಕೋರ್ಟ್ ಆದೇಶದಿಂದ ಉದ್ಭವವಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಅಭಿಪ್ರಾಯ ಪಡೆದು ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಹಿಂದುಳಿದ ಜಾತಿಗಳು ದಶಕಗಳ ಕಾಲದಿಂದ ರಾಜಕೀಯ ಮೀಸಲಾತಿ ಇಲ್ಲದ ಕಾರಣ ನ್ಯಾಯಬದ್ದ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿವೆ.
ಸುಪ್ರೀಮ್ ಕೋರ್ಟ್ ಆದೇಶದಿಂದ ಮತ್ತೆ ಅವರು ಅವಕಾಶವನ್ನು ಕಳೆದುಕೊಂಡರೆ ಅದು ಸಾಮಾಜಿಕ ನ್ಯಾಯದ ಉಲ್ಲಂಘನೆಯಾಗುತ್ತದೆ ಎಂದು ಸಿದ್ದು ಎಚ್ಚರಿಸಿದರು.
ಸುಪ್ರೀಮ್ ಕೋರ್ಟ್ ಇತ್ತೀಚಿನ ಆದೇಶದಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿನ ಹಿಂದುಳಿದ ಜಾತಿಯ ರಾಜಕೀಯ ಮೀಸಲಾತಿಗೆ ಎದುರಾಗಿರುವ ಅಡ್ಡಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ,ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯಿಂದ ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಹಿರಿಯ ವಕೀಲ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಕಾರ್ಯವ್ಯಾಪ್ತಿಯಲ್ಲಿ ರಾಜಕೀಯ ಕ್ಷೇತ್ರ ಸೇರಿಲ್ಲದೆ ಇದ್ದರೂ ಅದು ರಾಜ್ಯದ ಎಲ್ಲ ಜಾತಿ ಜನರ ರಾಜಕೀಯ ಪ್ರಾತಿನಿಧ್ಯದ ಮಾಹಿತಿಯನ್ನು ಕೂಡಾ ಸಂಗ್ರಹಿಸಿದೆ. ರಾಜ್ಯಸರ್ಕಾರ ಈ ಅಂಶವನ್ನು ಗಮನಕ್ಕೆ ತಂದರೆ ಸುಪ್ರೀಮ್ ಕೋರ್ಟ್ ಗಣನೆಗೆ ತೆಗೆದುಕೊಳ್ಳಬಹುದು ಎಂದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಮನೆಮನೆಗೆ ಹೋಗಿ ರಾಜ್ಯದ ಜನತೆಯ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸಮೀಕ್ಷೆ ನಡೆಸಿರುವುದರಿಂದ ಎಲ್ಲ ಜಾತಿ ಜನರ ರಾಜಕೀಯ ಪ್ರಾತಿನಿಧ್ಯದ ನಿಖರವಾದ ಮಾಹಿತಿ ಇದ್ದು ಬೇರೆ ರಾಜ್ಯಗಳಂತೆ ಪ್ರತ್ಯೇಕ ಸಮೀಕ್ಷೆ ನಡೆಸುವ ಅಗತ್ಯ ಇರಲಾರದು.
2010ರಲ್ಲಿಯೇ ಸುಪ್ರೀಂಕೋರ್ಟ್ ರಾಜಕೀಯ ಮೀಸಲಾತಿಗೆ ಪ್ರತ್ಯೇಕ ಮಾನದಂಡ ರೂಪಿಸುವಂತೆ ಆದೇಶಿಸಿತ್ತು. ಆ ಆದೇಶವನ್ನು ಪರಿಶೀಲಿಸಲು ನಾನು ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದೆ. ಅದೇ ಸಮಿತಿಯನ್ನು ಪುನರ್ರಚಿಸಿ ಈಗಿನ ಬಿಕ್ಕಟ್ಟಿಗೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

