ನಿಷೇಧಾಜ್ಞೆ ಇದ್ದರೂ ಹರ್ಷ ಮೃತ ದೇಹದ ಮೆರವಣಿಗೆಗೆ ಅವಕಾಶ ಕೊಟ್ಟಿದ್ದು ಏಕೆ -ಸಿದ್ದು

ಬೆಂಗಳೂರು: ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದಗದರೂ‌‌ ಹರ್ಷ ಪಾರ್ಥಿವ ಶರೀರದ‌ ಮೆರವಣಿಗೆಗೆ ಅವಕಾಶ ಕೊಟ್ಟಿದ್ದು ಏಕೆ,ಮೆರವಣಿಗೆಯಲ್ಲಿ ಸಚಿವ ಈಶ್ವರಪ್ಪ ‌ಮತ್ತು ಬಿಜೆಪಿ ಸಂಸದ ರಾಘವೇಂದ್ರ ಭಾಗವಹಿಸಿದ್ದು ಏಕೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿ, ಯಾವುದೇ ಅನಾಹುತವಾದರೂ ಅದಕ್ಕೆ  ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಹೊಣೆ  ಎಚ್ಚರಿಸಿದರು.

ಶಿವಮೊಗ್ಗ ಗೃಹ ಸಚಿವರ ತವರು ಜಿಲ್ಲೆ, ಅಲ್ಲೇ ಈ ರೀತಿ ಕೊಲೆಗಳು ನಿರಂತರವಾಗಿ ನಡೆಯುತ್ತವೆ ಎಂದರೆ ಹೇಗೆ,144 ಸೆಕ್ಷನ್ ಜಾರಿಯಾಗಿದ್ದರೂ ಮೃತನ ಶವಯಾತ್ರೆಗೆ ಪೊಲೀಸ್ ಇಲಾಖೆ ಅವಕಾಶ ನೀಡಿದ್ದು ಹೇಗೆ  ಎಂದು ಸಿದ್ದು ಪ್ರಶ್ನಿಸಿದರು.

ಈ ಶವಯಾತ್ರೆಯಲ್ಲಿ ಸಚಿವ ಈಶ್ವರಪ್ಪ, ಸ್ಥಳೀಯ ಸಂಸದ ರಾಘವೇಂದ್ರ ಕೂಡ ಭಾಗವಹಿಸಿದ್ದರು, ಅಂದರೆ ಈ ಶವಯಾತ್ರೆಯನ್ನು ರಾಜ್ಯ ಸರ್ಕಾರದ ಪ್ರಾಯೋಜಿತ ಶವಯಾತ್ರೆ ಎನ್ನಬೇಕಾಗುತ್ತದೆ‌ ಎಂದು ಟೀಕಿಸಿದರು.

ಸಚಿವರ ಎದುರೇ ಕಲ್ಲುತೂರಾಟ ನಡೆದಿದೆ, ಅಂಗಡಿ, ವಾಹನಗಳಿಗೆ ಬೆಂಕಿ ಹಾಕಲಾಗಿದೆ, ಜನ ಗುಂಪು ಗುಂಪಾಗಿ ಕತ್ತಿ, ತಲ್ವಾರ್ ಹಿಡಿದು ಓಡಾಡಿದ್ದಾರೆ, ಈ ಮೆರವಣಿಗೆಯಲ್ಲಿ ಈಶ್ವರಪ್ಪ ಮುಂದೆ ನಿಂತಿದ್ದಾರೆ ಎಂದರೆ ಇದು ನಾಗರೀಕ ಸರ್ಕಾರವೇ  ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ವಿರುದ್ಧ ಸಾಕ್ಷಗಳು ಇದ್ದರೆ ಕೂಡಲೇ ಆ ಸಂಘಟನೆಗಳನ್ನು ನಿಷೇಧ ಮಾಡಲಿ, ನಿಷೇಧ ಮಾಡಬೇಡಿ ಎಂದು ಅವರಿಗೆ ಅಡ್ಡ ಬರುತ್ತಿರುವವರಾದರೂ ಯಾರು ಎಂದು ಸಿದ್ದು ತಿರುಗೇಟು ನೀಡಿದರು.

ಎಲ್ಲಾ ಕಾರಣಗಳಿಗಾಗಿ ಒಟ್ಟು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಬಿಜೆಪಿರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರೇ ರಾಷ್ಟ್ರೀಯ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಷ್ಟ್ರ ಧ್ವಜಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿಯುತವಾದುದ್ದು ಎಂದಿದ್ದಾರೆ.

ಈಶ್ವರಪ್ಪ ಅವರು ದೇಶ ಮತ್ತು ಸರ್ಕಾರಕ್ಕಿಂತ ದೊಡ್ಡವರಲ್ಲ. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಜೊತೆಗೆ ಕೂಡಲೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಸಿದ್ದು ಒತ್ತಾಯಿಸಿದರು.