ಬೆಂಗಳೂರು: ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನಗಳು ಮುಂದುವರೆದಿದೆ, ಪೋಷಕರು ಆತಂಕಪಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಯ ನೀಡಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಹೆಚ್ಚಿನ ವಿದ್ಯಾರ್ಥಿಗಳು ಉಕ್ರೇನ್ ನ ಪಶ್ಚಿಮ ಭಾಗದಲ್ಲಿದ್ದಾರೆ. ಅವರನ್ನು ಸುರಕ್ಷಿತವಾಗಿ ಇರುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಕೆಲವೇ ದಿನಗಳಲ್ಲಿ ರಸ್ತೆ, ವಾಯು ಮಾರ್ಗದ ಮೂಲಕ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುತ್ತೇವೆ.ಪಶ್ಚಿಮ ಭಾಗ ಸುರಕ್ಷಿತವಾಗಿದೆ. ಆದರೆ, ಪೂರ್ವಭಾಗದಲ್ಲಿ ರಕ್ಷಿಸುವ ಕೆಲಸ ನಡೆದಿದೆ ಎಂದು ತಿಳಿಸಿದರು.
ಕರ್ನಾಟಕದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನಾಹುತಗಳು ಆಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂಕರ್ ಗಳಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ. ಸಹಾಯವಾಣಿಯಿಂದ ಬಂದ ಕರೆಗಳ ಮಾಹಿತಿಯನ್ನು ಕೇಂದ್ರಕ್ಕೆ ನೀಡಿದ್ದೇವೆ ಎಂದರು.
ರಾಜತಾಂತ್ರಿಕವಾಗಿ ಯಶಸ್ವಿಯಾಗುತ್ತಿದ್ದೇವೆ. ಹಾಗಾಗಿ ನಮ್ಮವರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ಮೋದಿ ಕೂಡ ರಷ್ಯಾ ಅಧ್ಯಕ್ಷರ ಜೊತೆ ಮಾತನಾಡಿದ್ದಾರೆ. ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರುವ ಕೆಲಸ ನಡೆಯಲಿದೆ. ನಾನೂ ಕೂಡ ಕೆಲ ವಿದ್ಯಾರ್ಥಿಗಳ ಜೊತೆ ಮಾತನಾಡಿ ಧೈರ್ಯ ನೀಡಿದ್ದೇನೆ ಕೆಲ ಮಾಹಿತಿಯನ್ನೂ ಪಡೆದುಕೊಂಡಿದ್ದೇನೆ ಎಂದು ಸಿಎಂ ತಿಳಿಸಿದರು.
ಕಾಂಗ್ರೆಸ್ ಪಾದಯಾತ್ರೆ ಯಾವ ಕಾರಣಕ್ಕೆ ಅಂತಾ ಇಡೀ ಜಗತ್ತಿಗೆ ಗೊತ್ತಿದೆ. ಅಸೆಂಬ್ಲಿಯನ್ನು ಕೂಡ ರಾಜಕೀಯ ಕಾರಣಕ್ಕೆ ವ್ಯರ್ಥ ಮಾಡಿದ್ದರು. ಪಾದಯಾತ್ರೆ-1 ಏಕೆ, ಪಾದಯಾತ್ರೆ-2 ಏಕೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ ಅವರಲ್ಲಿ ಬಣಗಳು ಇವೆ ಎಂದು ಇದೇ ವೇಳೆ ಬೊಮ್ಮಾಯಿ ತಿರುಗೇಟು ನೀಡಿದರು.

