ಕಾಂಗ್ರೆಸ್ ನಿಂದ ನೀರಿಗಾಗಿ ನಮ್ಮ ನಡಿಗೆ ಪಾದಯಾತ್ರೆ ಮತ್ತೆ ಪ್ರಾರಂಭ

ಬೆಂಗಳೂರು: ಕಾಂಗ್ರೆಸ್ ಹಮ್ಮಿಕೊಂಡಿರುವ ನೀರಿಗಾಗಿ ನಮ್ಮ ನಡಿಗೆ ಬೃಹತ್ ಪಾದಯಾತ್ರೆ ಭಾನುವಾರ ರಾಮನಗರದಿಂದ ಮರುಚಾಲನೆಗೊಂಡಿದೆ.

ಎಐಸಿಸಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕ ನಾಯಕರು ಚಾಲನೆ ನೀಡಿದರು.

ಜ.9ರಿಂದ ಸುಮಾರು 10 ದಿನಗಳ ಕಾಲ ನಡೆಯಬೇಕಿದ್ದ ಪಾದಯಾತ್ರೆ ಕೊರೊನಾ ಸೋಂಕು ಹೆಚ್ಚಳದಿಂದಾಗಿ ನಾಲ್ಕು ದಿನಗಳಲ್ಲೇ ಮೊಟಕುಗೊಂಡಿತ್ತು.

ಕೊರೊನಾ ಪ್ರಕರಣಗಳು ಕಡಿಮೆಯಾಗಿದ್ದು ಈಗ 2ನೇ ಹಂತದಲ್ಲಿ ರಾಮನಗರದಿಂದಲೇ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ.

ಬೃಹತ್ ಸಂಖ್ಯೆಯಲ್ಲಿ ಮಹಿಳೆಯರು ಪಾದಯಾತ್ರೆಗೆ ಪೂರ್ಣಕುಂಭ ಸ್ವಾಗತ ನೀಡಿದರು. ದೇವರ ಕುಣಿತ, ಡೊಳ್ಳು ಕುಣಿತ, ಕಂಸಾಳೆ, ಪಟ್ಟದ ಕುಣಿತ ಸೇರಿದಂತೆ ಹಲವು ರೀತಿಯ ಜಾನಪದ ನೃತ್ಯಗಳು ಪಾದಯಾತ್ರೆಯ ರಂಗನ್ನು ಹೆಚ್ಚಿಸಿದವು.

ಸಾವಿರಾರು ಸಂಖ್ಯೆಯಲ್ಲಿ ಜನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರೂ ಕೂಡಾ ಭಾನುವಾರವಾಗಿದ್ದರಿಂದ ಸಂಚಾರ ವ್ಯವಸ್ಥೆಯಲ್ಲಿ ಹೆಚ್ಚು ಸಮಸ್ಯೆಯಾಗಲಿಲ್ಲ. ಆದರೆ ಪಾದಯಾತ್ರೆ ಇನ್ನೂ ಮುಂದುವರೆಯುವುದರಿಂದ ಸರ್ಕಾರಕ್ಕೆ ತಲೆಬಿಸಿಯಾಗಿದೆ.

ಮಾ.3ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾದಯಾತ್ರೆ ಸಮಾರೋಪ ನಡೆಯಲಿದೆ.