ಬೆಂಗಳೂರು: ಕೆಳದಿ ರಾಣಿ ಚೆನ್ನಮ್ಮ ಅವರ ವಿಚಾರಧಾರೆಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಲು ಸೂಚನೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೆಳದಿ ರಾಣಿ ಚೆನ್ನಮ್ಮ ಅವರ 350ನೆ ಪುಣ್ಯತಿಥಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಅವರು ಮಾತನಾಡಿದರು.
ಮುಂದಿನ ವರ್ಷ ಕೆಳದಿಯಲ್ಲೇ ಚೆನ್ನಮ್ಮನ ದಿನಾಚರಣೆ ಮಾಡಲಾಗುವುದು. ಕೆಳದಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ರಾಜ್ಯವೆಂದರೆ ರಸ್ತೆ, ಕಟ್ಟಡಕ್ಕೆ ಸೀಮಿತವಲ್ಲ. ಭವ್ಯ ಪರಂಪರೆ, ಸಂಸ್ಕøತಿ, ಭಾಷೆ, ಜೀವನಶೈಲಿ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳನ್ನು ಒಳಗೊಂಡಿರಬೇಕು ನಮ್ಮದು ಅಂತಹ ಪರಂಪರೆಯಾಗಿದೆ ಎಂದು ಹೇಳಿದರು.
ಪ್ರಗತಿಪರ ಚಿಂತನೆ ಮೂಲಕ ಗಟ್ಟಿತನವನ್ನು ತೋರಿಸಿದ ಕೆಳದಿ ಚೆನ್ನಮ್ಮ ದೂರದೃಷ್ಟಿ ಹೊಂದಿದ್ದರು.
ಶತ್ರುವನ್ನು ಕೂಡ ಕ್ಷಮಿಸುವ ದೊಡ್ಡಗುಣ ಅವರಲ್ಲಿತ್ತು. ಮೂರು ಬಾರಿ ದಾಳಿ ಮಾಡಿದ ಶತ್ರುವನ್ನೂ ಕ್ಷಮಿಸಿ ಆಶ್ರಯ ನೀಡುವ ಮೂಲಕ ದೊಡ್ಡಗುಣವನ್ನು ಅವರು ತೋರಿದ್ದಾರೆ. ಅಂತಹವರ ವಿಚಾರಧಾರೆಗಳು ಮಕ್ಕಳಿಗೆ ಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಆರೋಗ್ಯ ಸೇವೆಗೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗಿದೆ.ಕಳೆದ 20 ರಿಂದ 25 ವರ್ಷಗಳ ಹಿಂದೆ ಪೋಲಿಯೊ ರೋಗದಿಂದ ಉಂಟಾದ ದುಷ್ಪರಿಣಾಮವನ್ನು ನಾವು ಕಣ್ಣಾರೆ ನೋಡಿದ್ದೇವೆ.
ಅಂಗವಿಕಲತೆಗೆ ಮುಖ್ಯ ಕಾರಣ ಪೋಲಿಯೊ. ದೊಡ್ಡ ಪ್ರಮಾಣದಲ್ಲಿ ಜೀವಹಾನಿಯೂ ಆಗಿತ್ತು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ರೋಗ ದೇಹವನ್ನು ನಿಷ್ಕ್ರಿಯಗೊಳಿಸುತ್ತದೆ ಎಂದು ಹೇಳಿದರು.
ಸಂಪೂರ್ಣವಾಗಿ ನಿರ್ಮೂಲನೆಯಾಗದಿದ್ದರೂ ಕ್ಷಯರೋಗದ ಮೇಲೆ ನಿಯಂತ್ರಣ ಸಾಧಿಸಲಾಗಿದೆ. ಅದಕ್ಕೆ ಚಿಕಿತ್ಸೆಯೂ ಇದೆ. ಅದೇ ರೀತಿ ಕಾಲರಾ, ಮಲೇರಿಯಾ ರೋಗಗಳ ಮೇಲೆಯೂ ನಿಯಂತ್ರಣ ಸಾಧಿಸಲಾಗಿದೆ.
ಈಗ ಪೋಲಿಯೊ ಮುಕ್ತ ರಾಷ್ಟ್ರವೆಂದು ಘೋಷಣೆಯಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಪಲ್ಸ್ ಪೋಲಿಯೊ ಹನಿ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

