ಬೆಂಗಳೂರಿನಲ್ಲಿ ಮೂರು ದಿನ ಪಾದಯಾತ್ರೆ: ಸಂಚಾರ ದಟ್ಟಣೆಗೆ ಕ್ಷಮೆ ಯಾಚಿಸಿದ ಡಿಕೆಶಿ

ಬೆಂಗಳೂರು: ನೀರಿಗಾಗಿ ನಡಿಗೆ ಮೇಕೆದಾಟು ಪಾದಯಾತ್ರೆ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಸಂಚರಿಸುವುದರಿಂದ, ಅನಿವಾರ್ಯವಾಗಿ ಎದುರಾಗುವ ಸಂಚಾರ ದಟ್ಟಣೆಗೆ ಕ್ಷಮೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಫೆ.27ರಿಂದ ಎರಡನೇ ಹಂತದಲ್ಲಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನು ಆರಂಭಿಸಿದೆ.

ಮೊದಲ ದಿನ ರಾಮನಗರದಿಂದ ಪಾದಯಾತ್ರೆ ಶುರುವಾದಾಗ ಮೈಸೂರು, ಮಂಡ್ಯ ಭಾಗದ ಜನ ಸಂಚಾರ ದಟ್ಟಣೆಯಿಂದ ಹೈರಾಣಾಗಿ ಹೋಗಿದ್ದರು. ಎರಡನೇ ದಿನ ಪರಿಸ್ಥಿತಿ ಸುಧಾರಣೆಯಾಗಿದೆ.

ಮಂಗಳವಾರ ಬೆಂಗಳೂರು ಪ್ರವೇಶಿಸಿದ್ದು ನಗರದಾದ್ಯಂತ ಸಂಚರಿಸಲಿದೆ.

ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸುವುದರಿಂದ ಸಹಜವಾಗಿ ಸಂಚಾರದ ಮೇಲೆ ಒತ್ತಡ ಬೀಳುತ್ತದೆ.

ಇನ್ನು ಪಾದಯಾತ್ರೆಯಿಂದ ಹೆಚ್ಚುವರಿಯಾಗಿ 10ರಿಂದ 15 ಸಾವಿರ ಜನರು ರಸ್ತೆಗಳಲ್ಲಿ ನಡೆದು ಹೋಗಲು ಆರಂಭಿಸಿದರೆ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಲಿದೆ. ಪಾದಯಾತ್ರೆಯ ಸುತ್ತಮುತ್ತಲ ಭಾಗದಲ್ಲಿ ಜನ ಸಂಕಷ್ಟಕ್ಕೊಳಗಾಗುತ್ತಾರೆ.

ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿಡಿಯೋ ಸಂದೇಶದ ಮೂಲಕ ಜನರ ಕ್ಷಮೆಯಾಚಿಸಿದ್ದಾರೆ.

ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಶುಭಾಶಯಗಳೊಂದಿಗೆ ಮಾತು ಆರಂಭಿಸಿರುವ ಅಧ್ಯಕ್ಷರು, ಕಾಂಗ್ರೆಸ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ.

ಸಂಘ-ಸಂಸ್ಥೆಗಳು, ಗುರು-ಹಿರಿಯರು, ಮಠಾಧೀಶರು ಹೆಜ್ಜೆ ಹಾಕುತ್ತಿದ್ದಾರೆ. ಕಾವೇರಿ ನೀರಿನ ಹಕ್ಕಿಗಾಗಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಹೆಚ್ಚಿನ ಸಾರ್ವಜನಿಕರು ಭಾಗವಹಿಸಬೇಕು.

ಮುಂದಿನ ಮೂರು ದಿನಗಳ ಕಾಲ ನಗರದಾದ್ಯಂತ ಸಂಚರಿಸುತ್ತೇವೆ. ಈ ವೇಳೆ ಉಂಟಾಗುವ ಸಂಚಾರ ಅವ್ಯವಸ್ಥೆಗೆ ಕ್ಷಮೆ ಇರಲಿ ಎಂದಿದ್ದಾರೆ.

ಮೂರು ದಿನಗಳ ಕಾಲ ಸಂಚಾರದ ಸಮಸ್ಯೆಗಳನ್ನು ಸಹಿಸಿಕೊಂಡರೆ ಮುಂದಿನ 30 ವರ್ಷಗಳ ಕಾಲ ಕುಡಿಯಲು ಕಾವೇರಿ ನೀರು ಸಿಗುತ್ತದೆ. ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ಅನಿವಾರ್ಯ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.