ಬೆಂಗಳೂರು: ಪಾದಯಾತ್ರೆಯ ಯಶಸ್ಸನ್ನು ಸಹಿಸಲಾಗದೆ ಬಿಜೆಪಿ ಹಲವು ಹುನ್ನಾರಗಳನ್ನು ನಡೆಸಿ ಅಪಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಬೆಂಗಳೂರಿನ ಬಿಟಿಎಂ ಲೇಔಟ್‍ನಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮ್ಮದ್ ಮತ್ತಿತರರು ಸರ್ಕಾರದ ಧೋರಣೆಗಳನ್ನು ಖಂಡಿಸಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ ಪಾದಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಬರುತ್ತಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ನಮ್ಮ ಪಾದಯಾತ್ರೆ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸರ್ವ ಜನಾಂಗಗಳು, ಎಲ್ಲಾ ಪಕ್ಷಗಳಿಗೂ ಅವಕಾಶ ಮಾಡಿಕೊಟ್ಟಿದ್ದೇವೆ. ಬಹಳಷ್ಟು ಮಂದಿ ಪಕ್ಷಾತೀತವಾಗಿ ಭಾಗವಹಿಸಿದ್ದಾರೆ.ಅವರೆಲ್ಲ ಇತಿಹಾಸದಲ್ಲಿ ಉಳಿಯುತ್ತಾರೆ ಎಂದು ಹೇಳಿದರು.
ರಾಮಲಿಂಗಾರೆಡ್ಡಿ ಮಾತನಾಡಿ, ಮೇಕೆದಾಟು ಯೋಜನೆಗಾಗಿ ನಮ್ಮ ಸರ್ಕಾರ ಯೋಜನೆ ರೂಪಿಸಿ ಅಂಗೀಕಾರ ಪಡೆದುಕೊಂಡಿತ್ತು. ಪರಿಸರ ಇಲಾಖೆಯಿಂದ ಅನುಮತಿ ಪಡೆದು ಕಾಮಗಾರಿ ಆರಂಭಿಸಲು ಡಬಲ್ ಎಂಜಿನ್ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಇದು ಡಬ್ಬಾ ಎಂಜಿನ್ ಸರ್ಕಾರ ಎಂದು ಮೂದಲಿಸಿದರು.
ಬಿಜೆಪಿಯವರದು ಒಲೆಯ ಮುಂದೆ ಉತ್ತರ ಕುಮಾರನ ಪೌರುಷವಿದ್ದಂತೆ. ದೆಹಲಿಗೆ ಹೋಗಿ ಪ್ರಧಾನಿ ಅವರ ಮುಂದೆ ನಿಂತು ಒತ್ತಡ ಹಾಕುವ ಸಾಮರ್ಥ್ಯವಿಲ್ಲ. ಎಲ್ಲರೂ ಪೇಪರ್ ಟೈಗರ್‍ಗಳು. ಸಣ್ಣಪುಟ್ಟದರಲ್ಲೂ ಚಿಲ್ಲರೆ ರಾಜಕೀಯ ಮಾಡುತ್ತಾರೆ ಎಂದು ಕಿಡಿಕಾರಿದರು.
ಬೆಂಗಳೂರಿನ ಜನರ ನೀರಿನ ಹಕ್ಕಿಗಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಇದರಿಂದ ಸಂಚಾರ ದಟ್ಟಣೆಯಾಗುತ್ತಿದೆ. ಜನ ಕ್ಷಮಿಸಬೇಕು,ಈವರೆಗೂ ವ್ಯಾಪಕ ಬೆಂಬಲ ನೀಡಿದ್ದಾರೆ ಅವರಿಗೆ ಧನ್ಯವಾದ ಹೇಳುತ್ತೇವೆ ಎಂದು ಹೇಳಿದರು.

