ಬೆಂಗಳೂರು: ವೈದ್ಯಶಿಕ್ಷಣದ ಕನಸು ಕಾಣುವ ಬಡ, ಮಧ್ಯಮ ವರ್ಗದವರ ಬದುಕನ್ನು ನೀಟ್ ಛಿದ್ರಗೊಳಿಸುತ್ತಿದೆ, ಅಲ್ಲದೆ ಇದು ವಿದ್ಯಾರ್ಥಿಗಳು ಮತ್ತು ಪೋಷಕರ ಪಾಲಿಗೆ ಮರಣಶಾಸನವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಮೀಸಲಿಟ್ಟು ಉಳಿದವರಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಉಕ್ರೇನ್ ಗೆ ಮೆಡಿಕಲ್ ಓದಲು ಹೋಗಿ ರಷ್ಯಾ ದಾಳಿಯಿಂದ ವಿದ್ಯಾರ್ಥಿ ನವೀನ್ ದುರಂತ ಸಾವನ್ನಪ್ಪಿರುವುದು ನೀಟ್ ವ್ಯವಸ್ಥೆಯ ನಿರ್ಲಜ್ಜ ಮುಖವನ್ನು ಇಡೀ ದೇಶಕ್ಕೆ ದರ್ಶನ ಮಾಡಿಸಿದೆ ಎಂದಿದ್ದಾರೆ.
ಅರ್ಹತೆ ನೆಪದಲ್ಲಿ ಪ್ರತಿಭಾವಂತ ಆರ್ಥಿಕ ದುರ್ಬಲ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಡಲಾಗುತ್ತಿರುವ ಅನ್ಯಾಯಕ್ಕೆ ಅಂತ್ಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
10ನೇ ತರಗತಿಯಲ್ಲಿ ಶೇ.96, 2ನೇ ಪಿಯುಸಿಯಲ್ಲಿ ಶೇ. 97 ಅಂಕ ಗಳಿಸಿದ್ದರೂ ನವೀನ್ ಗೆ ಜಗತ್ತಿನ ಶಿಕ್ಷಣ ಕಾಶಿ ಭಾರತದಲ್ಲಿ ವೈದ್ಯಸೀಟು ಸಿಕ್ಕಿಲ್ಲ, ಗ್ರಾಮೀಣ ವಿದ್ಯಾರ್ಥಿಯೊಬ್ಬ ಇಂತಹ ಉತ್ತಮ ಅಂಕ ಗಳಿಸುವುದು ಸುಲಭವಲ್ಲ. ಆದರೂ, ಆತನಿಗೆ ನಮ್ಮ ದೇಶದಲ್ಲಿ ವೈದ್ಯ ಶಿಕ್ಷಣ ನಿರಾಕರಿಸಲಾಗಿದೆ ಎಂದು ಬೇಸರ ಪಟ್ಟಿದ್ದಾರೆ.
ಭಾರತದಲ್ಲಿ ನಿರಾಕರಿಸಲ್ಪಟ್ಟ ಶಿಕ್ಷಣವನ್ನು ಹುಡುಕಿಕೊಂಡು ಉಕ್ರೇನ್ ಗೆ ಹೋಗಿ, ಅಲ್ಲಿ ಕಲಿತು ಇನ್ನೊಬ್ಬರ ಜೀವ ಉಳಿಸಲು ನೂರುಕಾಲ ಬಾಳಿ ಬದುಕಬೇಕಿದ್ದ ನವೀನ್ ಜೀವ ಕಳೆದುಕೊಂಡು ವಿಶ್ವಗುರು ಆಗಬೇಕೆಂದು ಹಾತೊರೆಯುತ್ತಿರುವ ಭಾರತದ ಆತ್ಮಸಾಕ್ಷಿಗೆ ಪ್ರಶ್ನೆಯಾಗಿದ್ದಾನೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ನೀಟ್ ಭಾರತದ ಮಧ್ಯಮ, ಬಡವರ್ಗದ ಮಕ್ಕಳ ಮೆಡಿಕಲ್ ಕನಸನ್ನು ಮರೀಚಿಕೆಯನ್ನಾಗಿಸಿದೆ. ಅದು ವಕ್ಕರಿಸಿದ ಮೇಲೆ ಟ್ಯೂಷನ್ ಅಂಗಡಿಗಳು ನಾಯಿಕೊಡೆಗಳಂತೆ ಮೇಲೆದ್ದಿವೆ. ಕೋಟಿ ಕೋಟಿ ವ್ಯಾಪಾರ ಆಗುತ್ತಿದೆ. ಅವು ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಪೀಕುತ್ತಿವೆ.
ಸರಕಾರಿ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ನೀಟ್ ತೇರ್ಗಡೆ ಕಷ್ಟ. ಈ ದೌರ್ಬಲ್ಯವನ್ನರಿತೇ ಟ್ಯೂಷನ್ ಅಂಗಡಿಗಳು ಮಾರುಕಟ್ಟೆ ವಿಸ್ತರಿಸಿ ನವೀನ್ ರಂಥ ವಿದ್ಯಾರ್ಥಿಗಳ ಶವಗಳ ಮೇಲೆ ರಣಕೇಕೆ ಹಾಕುತ್ತಿವೆ.
ನೀಟ್ ಹೆಸರಿನಲ್ಲಿ ನೀಟಾಗಿ ಉಳ್ಳವರಿಗೆ ವೈದ್ಯ ಶಿಕ್ಷಣವನ್ನು ದಾಸೋಹ ಮಾಡುವ ದಂಧೆ ವಿರುದ್ಧ ಎಲ್ಲರೂ ದನಿ ಎತ್ತಬೇಕಿದೆ ಎಂದು ಎಚ್ ಡಿ ಕೆ ಕರೆ ನೀಡಿದ್ದಾರೆ.

