ಭಾರತದ ತ್ರಿವರ್ಣ ಧ್ವಜಕ್ಕೆ ಉಕ್ರೇನ್-ರಷ್ಯಾದವರಿಗೆ ಬಹಳ ಗೌರವ -ಹಬೀಬ್

ದಾವಣಗೆರೆ: ಭಾರತದ ತ್ರಿವರ್ಣ ಧ್ವಜ ಕಂಡರೆ ಉಕ್ರೇನ್ ಹಾಗೂ ರಷ್ಯಾದವರು ಬಹಳ ಗೌರವ ಕೊಡುತ್ತಾರೆ,ಹಾಗಾಗಿಯೇ ನಾವು ಬದುಕಿದ್ದೇವೆ ಎಂದು ಮಹ್ಮದ್ ಹಬೀಬ್ ಅಲಿ ಎಂಬ ವಿದ್ಯಾರ್ಥಿ ಹೇಳಿದ್ದಾರೆ.

ಉಕ್ರೇನ್‍ನಲ್ಲಿ ಸಂಕಷ್ಟಕ್ಕೊಳಗಾಗಿ ಸುರಕ್ಷಿತವಾಗಿ ದಾವಣಗೆರೆಗೆ ಮರಳಿರುವ ಮಹ್ಮದ್ ಹಬೀಬ್ ಅಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ದಾವಣಗೆರೆಯ ಭಗತ್ ಸಿಂಗ್ ನಗರ ವಾಸಿ ಹಬೀಬ್ ಅಲಿ, ಉಕ್ರೇನ್‍ನ ಚರ್ನಿವಿಸ್ತಿಯಲ್ಲಿ ಎಂಬಿಬಿಎಸ್ ಓದುತ್ತಿದ್ದರು. ಕಳೆದ ಡಿಸೆಂಬರ್‍ನಲ್ಲಿ ಉಕ್ರೇನ್‍ಗೆ ತೆರಳಿದ್ದರು.

ಯುದ್ಧ ಪ್ರಾರಂಭವಾಗಿದ್ದರಿಂದ ಅವರು ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದಾಗಿ ಅವರನ್ನೆಲ್ಲ ಯುನಿವರ್ಸಿಟಿಯ ಹಾಸ್ಟೆಲ್‍ನಲ್ಲಿಯೇ ಇರಿಸಲಾಗಿತ್ತು.

ಆ ಹಾಸ್ಟೇಲ್‍ಗೆ ಭಾರತದ ತ್ರಿವರ್ಣ ಧ್ವಜ ಹಾಕಿದ್ದರಿಂದಲೇ ತಾವು ಬಚಾವ್ ಆಗಿದ್ದೇವೆ ಎಂದು ಹಬೀಬ್ ಅಲಿ ಹೇಳಿದ್ದಾರೆ. ಭಾರತಕ್ಕೆ ಸುರಕ್ಷಿತವಾಗಿ ಮರಳಿ ಬಂದಿದ್ದಕ್ಕೆ ದೇಶದ ತ್ರಿವರ್ಣ ಧ್ವಜ ಹಾಗೂ ಕೇಂದ್ರ ಸರ್ಕಾರಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ.

ಉಕ್ರೇನ್ ಚರ್ನಿವಿಸ್ತಿಯಿಂದ 35ಕಿ.ಮೀ. ದೂರದ ರುಮೇನಿಯಾಕ್ಕೆ ಬಸ್ ಮೂಲಕ ಬಂದು ಅಲ್ಲಿಂದ ಬುಕಾರೇಸ್‍ಗೆ ಕರೆತಂದ ಭಾರತದ ರಾಯಭಾರ ಕಚೇರಿಯವರು, ಬಳಿಕ ವಿಮಾನದಲ್ಲಿ ಭಾರತಕ್ಕೆ ಏರ್ ಲಿಫ್ಟ್ ಮಾಡಿದ್ದಾರೆ.

ನಂತರ ಮುಂಬೈ ಮೂಲಕ ದಾವಣಗೆರೆಗೆ ಹಬೀಬ್ ಅಲಿ ಬಂದಿಳಿದಿದ್ದಾರೆ. ಮಗ ಸುರಕ್ಷಿತವಾಗಿ ಮರಳಿದ್ದಕ್ಕೆ ತಂದೆ ಶೌಕತ್ ಅಲಿ ಮತ್ತು ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.

ಭಾರತ ಧ್ವಜ ನೋಡಿದಾಕ್ಷಣ ರಷ್ಯಾ ಹಾಗೂ ಉಕ್ರೇನ್ ಸೈನಿಕರು ಏನೂ ಮಾಡುತ್ತಿರಲಿಲ್ಲ. ನಾವಿದ್ದ ಹಾಸ್ಟೆಲ್‍ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾಕಲಾಗಿತ್ತು. ಹೀಗಾಗಿ ಉಕ್ರೇನ್ ಹಾಗೂ ರಷ್ಯಾ ಸೈನಿಕರೇ ನಮಗೆ ಭದ್ರತೆ ನೀಡಿದ್ದರು. ಭಾರತೀಯರನ್ನು ಬಿಟ್ಟು ಬೇರೆ ದೇಶದವರಿಗೆ ತಮ್ಮ ರಾಷ್ಟ್ರಧ್ವಜ ಹಾಕಲು ಅನುಮತಿ ಕೊಟ್ಟಿರಲಿಲ್ಲ ಎಂದು ಹಬೀಬ್ ಹೇಳಿದ್ದಾರೆ.

ನಮಗೆ ಮಾತ್ರ ಭಾರತದ ಧ್ವಜ ಹಾಕಲು ಅವಕಾಶ ನೀಡಿದ್ದರು. ಹಾಗಾಗಿ ಈಜಿಪ್ಟ್ ಸೇರಿದಂತೆ ಬೇರೆ ದೇಶದವರೂ ಅಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತೀಯರು ಮಾತ್ರ ಸುರಕ್ಷಿತರಾಗಿದ್ದಾರೆ. ಅವರೆಲ್ಲರೂ ಆದಷ್ಟು ಬೇಗ ವಾಪಸ್ ಭಾರತಕ್ಕೆ ಮರಳಬೇಕು ಎಂಬುದು ನನ್ನ ಆಸೆ ಎಂದು ಹಬೀಬ್ ಅಲಿ ಪ್ರಾರ್ಥಿಸಿದ್ದಾರೆ.

ಸದ್ಯ ಉಕ್ರೇನ್‍ನಲ್ಲಿ ಪರಿಸ್ಥಿತಿ ತುಂಬ ಹದಗೆಟ್ಟಿದೆ. ಅನ್ನ, ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಎಲ್ಲ ಕಡೆ ಕರ್ಫ್ಯೂ ಹಾಕಲಾಗಿದೆ. ಯಾರೂ ಹೊರಗೆ ಹೋಗುವಂತಿಲ್ಲ. ಚರ್ನಿವಿಸ್ತಿ, ಕಾರ್ಕಿವ್ ಹಾಗೂ ಕೀವ್‍ನಲ್ಲಿ ಕರ್ನಾಟಕದ ಇನ್ನೂ ಬಹಳಷ್ಟು ಜನರಿದ್ದು, ಬಂಕರ್, ನೆಲಮಹಡಿಗಳಲ್ಲಿ ರಕ್ಷಣೆ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅವರೆಲ್ಲರನ್ನು ಕರೆತರಲು ಸರ್ಕಾರ ಕೂಡಲೇ  ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.