ರಷ್ಯಾ ದಾಳಿಯಿಂದ ಉಕ್ರೇನ್ ತತ್ತರ: ದೇಶ ತೊರೆದ 10 ಲಕ್ಷ ಮಂದಿ

ಜಿನೀವಾ: ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ಆರೇ ದಿನಗಳಲ್ಲಿ ಒಂದು ಮಿಲಿಯನ್ (10 ಲಕ್ಷ) ಜನರು ಉಕ್ರೇನ್ ದೇಶವನ್ನು ತೊರೆದಿದ್ದಾರೆ ಎಂದು ಯುಎನ್ ನಿರಾಶ್ರಿತರ ಸಂಸ್ಥೆ ವರದಿಮಾಡಿದೆ.

ಇದು ಈ ಶತಮಾನದ ಅತೀ ದೊಡ್ಡ ವಲಸೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ವಿಶ್ವ ಬ್ಯಾಂಕ್ ಎಣಿಕೆ 2020ರ ಪ್ರಕಾರ 44 ಮಿಲಿಯನ್ ಜನಸಂಖ್ಯೆಯಲ್ಲಿ ಶೇ.2ಕ್ಕಿಂತ ಹೆಚ್ಚು ಜನ ಪಲಾಯನ ಮಾಡುತ್ತಿದ್ದು, ಸುಮಾರು 4 ಮಿಲಿಯನ್ ಜನರು ಅಂತಿಮವಾಗಿ ಉಕ್ರೇನ್ ತೊರೆಯಬಹುದು ಯುಎನ್ ಹೈ ಕಮಿಷನರ್ ಫಿಲಿಪ್ಪೋ ಗ್ರಾಂಡಿ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಸ್ಪೋಟದ ಮಾರ್ಟರ್ ಶೆಲ್‍ಗಳು ಮತ್ತು ಗುಂಡೇಟುಗಳು ದೇಶದಾದ್ಯಂತ ಮೊರೆಯುತ್ತಿದ್ದಂತೆ ಉಕ್ರೇನಿಯನ್ನರು ಹತಾಶೆಯಿಂದ ವಲಸೆ ಹೋಗುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಪೋಲೆಂಡ್‍ಗೆ 505,000ಕ್ಕಿಂತ ಹೆಚ್ಚು, ಹಂಗೇರಿಗೆ 116,000 ಮೊಲ್ಡೊವಾ 79,000 ಮತ್ತು ಜಕೊಸ್ಲೋವಾಕಿಯಾಕ್ಕೆ 71,200 ಕ್ಕಿಂತ ಹೆಚ್ಚು ಜನ ಪಲಾಯನ ಮಾಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.