ಜಗತ್ತು ಭಾರತವನ್ನು ಉತ್ಪಾದನಾ ಶಕ್ತಿಯಾಗಿ ನೋಡುತ್ತಿದೆ -ಮೋದಿ

ನವದೆಹಲಿ: ಜಗತ್ತು ಇಂದು ಭಾರತವನ್ನು ಉತ್ಪಾದನಾ ಶಕ್ತಿಯಾಗಿ ನೋಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೋದಿ ಗುರುವಾರ ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್ ಕುರಿತು ಬಜೆಟ್ ನಂತರದ ವೆಬಿನಾರ್ ನಲ್ಲಿ ಭಾಗವಹಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.

ನಾವು ಎಲೆಕ್ಟ್ರಿಕ್ ವಾಹನಗಳು, ವೈದ್ಯಕೀಯ ಸಾಧನಗಳಲ್ಲಿ ಮೇಕ್ ಇನ್ ಇಂಡಿಯಾ ಅನ್ನು ಪ್ರಚಾರ ಮಾಡಬಹುದು.ಆದರೆ ಕೈಗಾರಿಕೆಗಳು ತಮ್ಮ ಉತ್ಪನ್ನಗಳ ಜಾಹೀರಾತುಗಳಲ್ಲಿ ಲೋಕಲ್ ಫಾರ್ ವೋಕಲ್ ಮತ್ತು ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡಬೇಕು ಎಂದು ಸಲಹೆ ನೀಡಿದರು.

ಮೇಕ್ ಇನ್ ಇಂಡಿಯಾ ಅಭಿಯಾನವು 21 ನೇ ಶತಮಾನದ ಭಾರತದ ಇಂದಿನ ಅಗತ್ಯವಾಗಿದೆ. ಇದು ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.

ಇಂತಹ ದೊಡ್ಡ ಬಿಕ್ಕಟ್ಟುಗಳು ಮುನ್ನೆಲೆಗೆ ಬಂದಾಗ ಮತ್ತು ಪರಿಸ್ಥಿತಿಗಳು ಬದಲಾದಾಗ, ಮೇಕ್ ಇನ್ ಇಂಡಿಯಾದ ಅಗತ್ಯವು ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಮೋದಿ ತಿಳಿಸಿದರು.

ಭಾರತದಂತಹ ಬೃಹತ್ ದೇಶವು ಕೇವಲ ಮಾರುಕಟ್ಟೆಯಾಗಿ ಉಳಿದರೆ, ಎಂದಿಗೂ ಪ್ರಗತಿ ಹೊಂದಲು ಸಾಧ್ಯವಿಲ್ಲ, ನಮ್ಮ ಯುವ ಪೀಳಿಗೆಗೆ ಅವಕಾಶಗಳನ್ನು ನೀಡಲು ಸಾಧ್ಯವಾಗುವುದಿಲ್ಲ.

ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ, ಪೂರೈಕೆ ಸರಪಳಿಯು ಪ್ರಪಂಚದಲ್ಲಿ ಹೇಗೆ ಧ್ವಂಸಗೊಂಡಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ ಹಾಗಾಗಿ ಮೇಕ್ ಇನ್ ಇಂಡಿಯಾ ಅಗತ್ಯ ಈಗ ಹೆಚ್ಚಿದೆ ಎಂದಿದ್ದಾರೆ.