ಬೆಂಗಳೂರು: ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಕೂಡಾ ಸರ್ಕಾರಿ ನೌಕರರ ವೇತನ ಹಾಗೂ ಅನುಷ್ಠಾನಕ್ಕಾಗಿ ಅಧಿಕಾರಿಗಳ ವೇತನ ಹೆಚ್ಚಳ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಈ ಸಂಬಂಧ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಯಡಿಯೂರಪ್ಪ ಅವರು ಕೇಂದ್ರ ಹಾಗೂ ಇತರೆ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಸರ್ಕಾರಿ ನೌಕರರ ವೇತನವನ್ನು ಹೆಚ್ಚಳ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಹೀಗಾಗಿ ಅದರ ಪರಾಮರ್ಶೆ ಮತ್ತು ಅನುಷ್ಠಾನಕ್ಕಾಗಿ ಬಜೆಟ್‍ನಲ್ಲಿ ಅಧಿಕಾರಿಗಳ ವೇತನ ಸಮಿತಿ ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ 2016ರಲ್ಲಿ ಏಳನೆ ವೇತನ ಆಯೋಗದ ಶಿಫಾರಸುಗಳನ್ನಾಧರಿಸಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಿದೆ. ದೇಶದ 28 ರಾಜ್ಯಗಳಲ್ಲಿ ಈಗಾಗಲೇ 25 ರಾಜ್ಯಗಳಲ್ಲಿ ಈ ಮಾದರಿ ಜಾರಿಯಲ್ಲಿದೆ ಎಂದು ಬಿಎಸ್ ವೈ ಮನವರಿಕೆ ಮಾಡಿದ್ದಾರೆ.
ದೇಶದ ಜಿ ಎಸ್ ಡಿ ಪಿ ಯನ್ನು ಅವಲೋಕಿಸಿದರೆ ರಾಜ್ಯ ಸರ್ಕಾರವು ಅಭಿವೃದ್ಧಿ, ಪ್ರಗತಿ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ರಾಷ್ಟ್ರದಲ್ಲಿ ಆರನೆ ಸ್ಥಾನದಲ್ಲಿದೆ. ಈ ಪ್ರಗತಿಗೆ ಸರ್ಕಾರಿ ನೌಕರರ ಸೇವೆ ಹಾಗೂ ಅವರ ಪಾತ್ರವು ಪ್ರಮುಖವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರಿ ನೌಕರರು ಈ ಹಿಂದೆ ಕೋವಿಡ್ ಮೊದಲನೆ ಮತ್ತು ಎರಡನೆ ಅಲೆ ಸಂದರ್ಭದಲ್ಲಿ ತಮ್ಮ ಕುಟುಂಬ ಹಾಗೂ ಜೀವದ ಹಂಗು ತೊರೆದು ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ.
ಅವರ ದಕ್ಷತೆ ಹಾಗೂ ನಿಸ್ವಾರ್ಥ ಸೇವೆಯಿಂದಲೇ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರಲು ಸಾಧ್ಯವಾಯಿತು.
ಇದರ ಪರಿಣಾಮ ರಾಜ್ಯಕ್ಕೆ ದೇಶದಲ್ಲೇ ಉತ್ತಮ ಹೆಸರು ಬಂದಿದೆ ಎಂದು ಯಡಿಯೂರಪ್ಪ ಪ್ರಶಂಸಿಸಿದ್ದಾರೆ.
ಈಗ ವೇತನ ಪರಿಷ್ಕರಣೆ ಅಗತ್ಯವಾಗಿರುವುದರಿಂದ ಈ ಬಾರಿಯ ಬಜೆಟ್‍ನಲ್ಲಿ ನೌಕರರ ಸಂಘದ ಮನವಿಯಂತೆ ವೇತನ ಸಮಿತಿಯನ್ನು ರಚಿಸಬೇಕೆಂದು ಬಿಎಸ್‍ವೈ ಮನವಿ ಮಾಡಿದ್ದಾರೆ.

