ಮೈಸೂರು: ಭಾರತೀಯ ಜನೌಷಧ ದಿವಸ್ ಅಂಗವಾಗಿ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ ಜನೌಷಧಿ ಕೇಂದ್ರದಲ್ಲಿ ರಾಷ್ಟ್ರೀಯ ಹಿಂದೂ ಸಮಿತಿ ಆಯೋಜಿಸಿದ್ದ ಜನೌಷಧಿ ಉಪಯೋಗ್ ಅಭಿಯಾನಕ್ಕೆ ಶ್ರೀ ದತ್ತವಿಜಯಾನಂದ ಸ್ವಾಮೀಜಿರವರು ಚಾಲನೆ ನೀಡಿದರು.
ಈ ವೇಳೆ ಶ್ರೀ ದತ್ತವಿಜಯಾನಂದ ಸ್ವಾಮೀಜಿಯವರು ಮಾತನಾಡಿ, ಹಣ ಸಂಪಾದನೆಯ ಹಿಂದೆ ಬಿದ್ದಾಗ ಆಯುಷ್ಯ ಸಮಯ ಕಳೆದುಹೋಗುತ್ತದೆ. ಆರೋಗ್ಯ ಕೆಡದಂತೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ಹೇಳಿದರು.
ಮಧ್ಯಮವರ್ಗದ ಕುಟುಂಬದಲ್ಲಿ ಆರೋಗ್ಯ ನಿರ್ವಹಣೆ ವೆಚ್ಚ ಬಹಳ ಕಷ್ಟಕರ, ಬಡವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಔಷಧಿ ಸಿಗಬೇಕೆಂಬ ಕಲ್ಪನೆಯೊಂದಿಗೆ 15 ವರ್ಷಗಳ ಹಿಂದೆ ಸ್ಥಾಪಿತವಾಗಿದ್ದ ಜನೌಷಧಿ ಕೇಂದ್ರಗಳು ಇಂದು ಭಾರತದಲ್ಲಿ 8 ಸಾವಿರಕ್ಕೂ ಹೆಚ್ಚು ಮಳಿಗೆಗಳಿರುವುದು ಉತ್ತಮ ಬೆಳವಣಿಗೆ ಎಂದರು.
ಯಾವುದೇ ಖಾಯಿಲೆ, ರೋಗಲಕ್ಷಣಗಳಿದ್ದರೂ ಸಹ ಜನೌಷಧಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುಬಹುದಾದ ಔಷಧಿಗಳಿವೆ.
ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಾಗಿ ಜನೌಷಧಿ ಕೇಂದ್ರದಲ್ಲಿ ಔಷಧಿ ಪಡೆದುಕೊಳ್ಳಲು ಮುಂದಾಗಬೇಕು ಇದರಿಂದ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ ರಾಜೀವ್ ಮಾತನಾಡಿ, ನಮ್ಮ ಪೂರ್ವಜರು ಆಯುರ್ವೇದ ಔಷಧಿ ಗಿಡಮೂಲಿಕೆಗಳಲ್ಲಿ ಆಹಾರ ಪದ್ದತಿ ರೂಡಿಸಿಕೊಂಡು ನೆಮ್ಮದಿಯಿಂದ ಬದುಕಿಬಾಳಿದ್ದರು. ಇಂದು ಪಾಶ್ಚಿಮಾತ್ಯ ಆಹಾರಗಳ ಪದ್ದತಿಯಿಂದ ಚಿಕ್ಕವಯಸ್ಸಿನಲ್ಲೆ ಯುವಕರು ಆರೋಗ್ಯವನ್ನ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.
ಔಷಧಿ, ಚಿಕಿತ್ಸೆ ಬಹಳ ದುಬಾರಿ ಎನ್ನುವ ಕಾಲಮಾನದಲ್ಲಿ ಬಡವರ್ಗದವರಿಗೆ ಕೈಗೆಟಕುವ ದರದಲ್ಲಿ ಮಾತ್ರೆಗಳು ಔಷಧಿಗಳು ಸಿಗಬೇಕು ಎಂದು ಜನೌಷಧಿ ಕೇಂದ್ರವನ್ನ ಸ್ಥಾಪಿಸಲಾಗಿದೆ. ಅದನ್ನ ವ್ಯಪಾಕವಾಗಿ ಇಡೀ ದೇಶದಲ್ಲಿ ಗ್ರಾಮ ಮಟ್ಟದಲ್ಲಿ ತೆರೆಯಬೇಕು ಎಂದು ಕಾರ್ಯರೂಪಕ್ಕೆ ತಂದವರು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಕೇಂದ್ರದ ಮಾಜಿ ಸಚಿವರಾದ ದಿ. ಅನಂತಕುಮಾರ್ ಎಂದು ಸ್ಮರಿಸಿದರು.
ಶ್ರೀಗಣಪತಿ ಸಚ್ಚಿದಾನಂದ ಆಸ್ಪತ್ರೆಯ ವೈದ್ಯರಾದ ಪಣೀಶ್ ಶ್ರೀ ರವರು ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿ ಆಹಾರ ವಿಚಾರ ವ್ಯವಹಾರ ಸಮತೋಲನ ಕೆಟ್ಟಾಗಲೇ ಆರೋಗ್ಯ ಕೈಕೊಡುತ್ತದೆ ಏರುಪೇರಾದಾಗ ಪ್ರಾರ್ಥಮಿಕ ಹಂತದಲ್ಲೇ ಆರೋಗ್ಯ ತಪಾಸಣೆ ಮಾಡಿಸಿ ಸೂಕ್ತ ಔಷಧಿ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಜನೌಷಧಿ ಕೇಂದ್ರದಲ್ಲಿ ಯಾವುದೇ ರೋಗಲಕ್ಷಣಗಳಿದ್ದರೂ ರಾಮಬಾಣದಂತೆ ಗುಣಪಡಿಸಬಲ್ಲ 1800ಕ್ಕೂ ಹೆಚ್ಚು ವಿವಿಧ ಮಾತ್ರೆಗಳಿದ್ದು 250ಕ್ಕೂ ಹೆಚ್ಚು ಸರ್ಜಿಕಲ್ಸ್ ಲಭ್ಯವಿದೆ, ಬಡವರ್ಗದ ಜನರಿಗೆ ಜನೌಷಧಿ ಸೇವಾಕೇಂದ್ರ ಆಸರೆಯಾಗಿದೆ ಎಂದರು
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರೀ,ಯುವ ಮುಖಂಡ ಅಜಯ್ ಶಾಸ್ತ್ರಿ, ಜೀವನ್ ಪದಾಧಿಕಾರಿಗಳಾದ ತೇಜಸ್, ಪ್ರದೀಪ್, ಗಗನ್, ನರೇಂದ್ರ ಉಪಸ್ಥಿತರಿದ್ದರು

