ಮೈಸೂರು: ಉಕ್ರೇನ್ ನಿಂದ ಮೈಸೂರಿನ ಕೃಷ್ಣರಾಜ ಕ್ಷೇತ್ರಕ್ಕೆ ಸುರಕ್ಷಿತವಾಗಿ ಆಗಮಿಸಿದ ವಿದ್ಯಾರ್ಥಿಗಳ ಮನೆಗೆ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದ ಎಸ್.ಎ.ರಾಮದಾಸ್ ಅವರು ಉಕ್ರೇನ್ ನಲ್ಲಿ ಸುಮಾರು 18 ಸಾವಿರಕ್ಕೂ ಅಧಿಕ ಭಾರತೀಯರು ಸಂಕಷ್ಟದಲ್ಲಿ ಸಿಲುಕಿದ್ದು ಭಾರತ ಸರ್ಕಾರ ಅವರನ್ನು ರಕ್ಷಿಸಲು ಪಣ ತೊಟ್ಟಿದೆ ಎಂದು ತಿಳಿಸಿದರು.
ಈಗಾಗಲೇ 10 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು ಕೆಲವೇ ದಿನಗಳಲ್ಲಿ ಅಷ್ಟೂ ಜನ ಭಾರತೀಯರು ಸುರಕ್ಷಿತವಾಗಿ ಮರಳಲಿದ್ದಾರೆ, ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಎಲ್ಲಾ ಭಾರತೀಯರನ್ನೂ ಕೂಡಾ ಸುರಕ್ಷಿತವಾಗಿ ದೇಶಕ್ಕೆ ಕರೆತರುತ್ತೇವೆ ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಉಕ್ರೇನ್ ನಲ್ಲಿ ವೈದ್ಯಕೀಯ ಕೋರ್ಸ್ ಓದುತ್ತಿರುವ ಟಿ. ಕೆ.ಲೇಔಟ್ ನ ಮುಕುಂದ್ ಎಂಬ ವಿದ್ಯಾರ್ಥಿ ಮಾತನಾಡಿ ಭಾರತ ಸರ್ಕಾರ ಸ್ಪಂದಿಸಿ ನಮ್ಮನ್ನು ಮನೆ ತಲುಪುವವರೆಗೂ ಕೂಡಾ ಕ್ಷೇಮವಾಗಿ ನೋಡಿಕೊಂಡಿದೆ ಎಂದು ಹೇಳಿದರು.
ಆಹಾರದ ಜೊತೆಗೆ ಆಶ್ರಯಕ್ಕೆ ಎಲ್ಲೂ ಕೂಡಾ ತೊಂದರೆಯಾಗದಂತೆ ನೋಡಿಕೊಂಡಿತು ಇದಕ್ಕಾಗಿ ಭಾರತ ಸರ್ಕಾರ ಹಾಗೂ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.
ಟಿ. ಕೆ. ಲೇಔಟ್ ನ ಮುಕುಂದ್, ಶ್ರೀ ಗಣೇಶ ಹಾಗೂ ಶ್ರೀರಾಂಪುರ ನಿವಾಸಿ ಪ್ರಿಯಾಂಕ ಗುರುಮಲ್ಲೇಶ್ ಅವರ ಮನೆಗೂ ರಾಮದಾಸ್ ಭೇಟಿ ನೀಡಿ ಯೋಗಕ್ಷ್ಮೇಮ ವಿಚಾರಿಸಿದರು.
ಸ್ಥಳೀಯ ನಗರಪಾಲಿಕಾ ಸದಸ್ಯರಾದ ಗೀತಾಶ್ರೀ ಯೋಗಾನಂದ್, ಪ್ರಮುಖರಾದ ಗಿರೀಶ್ ಗೌಡ, ಜಗದೀಶ್, ಶಿವಣ್ಣ,ರಾಜಣ್ಣ, ಮಂಜು, ಮಹೇಶ್, ಮಧು, ರಮೇಶ್, ಬಸವರಾಜ್, ಸತೀಶ್ ಕುಮಾರ್ ಇನ್ನಿತರರು ಹಾಜರಿದ್ದರು.

