ಅಧಿಕಾರಕ್ಕೆ ಬಂದರೆ ನೀಟ್ ವಿರುದ್ಧ ಅಸೆಂಬ್ಲಿಯಲ್ಲಿ ನಿರ್ಣಯ -ಎಚ್ ಡಿ ಕೆ

ಬೆಂಗಳೂರು: ನೀಟ್ ಬಂದ ಮೇಲೆ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಅನ್ಯಾಯ ಆಗಿಲ್ಲವೇ,ವಿದ್ಯಾರ್ಥಿಗಳ  ಆರ್ತನಾದ ಕೇಳುತ್ತಿಲ್ಲ ಎಂದರೆ  ಸಚಿವರು ಮತ್ತು ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ ಎನ್ನಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಲಕ್ಷ ಲಕ್ಷ ಕಿತ್ತು ಪೋಷಕರ ರಕ್ತ ಹೀರುವ ಟ್ಯೂಷನ್ ಗಳು ಸರ್ಕಾರಗಳ ಕಣ್ಣಿಗೆ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ.

2023ರಲ್ಲಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ ನೀಟ್ ವಿರುದ್ಧ ಅಸೆಂಬ್ಲಿಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ. ನಾವು ನೀಟ್ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

ಮಕ್ಕಳ ಜೀವಕ್ಕೆ ಕುಣಿಕೆ ಬಿಗಿದು ಕಂಡವರ ಜೇಬು ಭರ್ತಿ ಮಾಡುವ ಇಂತಹ ದಂಧೆ ಬೇಕಿಲ್ಲ. ಅದಕ್ಕೆ ಚರಮಗೀತೆ ಹಾಡುತ್ತವೆ ಎಂದು ಹೇಳಿದ್ದಾರೆ.

ಪ್ರಶ್ನೆ ಮಾಡಿದರೆ ದ್ರೋಹವೇ? ಧನದಾಹವೇ?

ಕರ್ನಾಟಕದ ಉನ್ನತ ಶಿಕ್ಷಣ ಸಚಿವರು ಕಟ್ಟಿರುವ ಈ ಹಣಿಪಟ್ಟಿ ಬಗ್ಗೆ ಏನೂ ಹೇಳಬೇಕೋ ಕಾಣೆ ಎಂದಿದ್ದಾರೆ.

ನೀಟ್ ವಿರೋಧಿಸುವವರು ಧನಧಾಹಿಗಳು, ದ್ರೋಹಿಗಳು ಎಂದು ಅವರು ಯಾರನ್ನು ಉದ್ದೇಶಿಸಿ ಹೇಳಿದ್ದು ಎನ್ನುವುದನ್ನು ಅವರೇ ತಿಳಿಸಬೇಕು ಎಂದು ಎಚ್ ಡಿ ಕೆ ಹೇಳಿದ್ದಾರೆ.

ನಾನು ಮೆಡಿಕಲ್ ಕಾಲೇಜು ನಡೆಸುತ್ತಿಲ್ಲ. ಎಂಜಿನಿಯರಿಂಗ್ ಕಾಲೇಜನ್ನೂ ನಡೆಸುತ್ತಿಲ್ಲ. ಕೊನೆಪಕ್ಷ ಒಂದು ಸಣ್ಣ ಕೈಗಾರಿಕೆಯೂ ಇಲ್ಲ. ಬಿಡದಿಯ ತೋಟ ಬಿಟ್ಟರೆ ನನ್ನದೂ ಎನ್ನುವಂಥದ್ದು ಏನೂ ಇಲ್ಲ.

ಆದರೂ, ಉನ್ನತ ಶಿಕ್ಷಣ ಸಚಿವ  ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ದ್ರೋಹಿಗಳು, ಧನಧಾಹಿಗಳು ಎಂದು ನಾಲಿಗೆ ಜಾರಿ, ತಮ್ಮ ಉನ್ನತ ಗುಣವನ್ನು ಜಗಜ್ಜಾಹೀರು ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಕೇಂದ್ರದ ಒಬ್ಬ ಸಚಿವರು, ನೀಟ್ ಪರೀಕ್ಷೆ ಪಾಸ್ ಮಾಡಲಾಗದ ವಿಧ್ಯಾರ್ಥಿಗಳು ವಿದೇಶಕ್ಕೆ ಹೋಗುತ್ತಾರೆ ಎಂದು ಆ ಮಕ್ಕಳ ಸ್ವಾಭಿಮಾನವನ್ನು ಅಪಮಾನಿಸಿದ್ದರೆ, ಉನ್ನತ ಶಿಕ್ಷಣ ಸಚಿವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದ್ರೋಹದ ಹಣೆಪಟ್ಟಿ ಕಟ್ಟಿ ದೊಡ್ಡತನ ಮೆರೆದಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.