ನವೀನ್ ಮೃತದೇಹ ಪಡೆಯಲು ಎಲ್ಲಾ ಪ್ರಯತ್ನ -ಬೊಮ್ಮಾಯಿ

ಬೆಂಗಳೂರು: ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಾವನ್ನಪ್ಪಿರುವ ನವೀನ್ ಮೃತದೇಹವನ್ನು ಪಡೆದುಕೊಳ್ಳಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಮೃತದೇಹವನ್ನು ಪಡೆಯಲು ನಿಖರ ಮಾಹಿತಿಯನ್ನು ಪಡೆಯಲಾಗುತ್ತಿದೆ. ಉಕ್ರೇನ್‍ನಿಂದ ಹಲವಾರು ಕನ್ನಡಿಗರನ್ನು ಕರೆತರಲಾಗಿದೆ ಎಂದು ಹೇಳಿದರು.

ಉಕ್ರೇನ್‍ ನ ಖರಕಾಯ್, ಕೀವ್‍ನಲ್ಲಿ ಯಾರೂ ಹೊರಬರಲಾರದ ಕಠಿಣ ಪರಿಸ್ಥಿತಿ ಇದೆ. ಅಲ್ಲಿ ಸಿಲುಕಿಕೊಂಡವರನ್ನು ಪತ್ತೆ ಹಚ್ಚಲು ರಾಯಭಾರಿ ಕಚೇರಿಯವರು ಕಾರ್ಯ ನಿರತರಾಗಿದ್ದಾರೆ.

ರಷ್ಯಾದ ದಾಳಿ ಕಡಿಮೆಯಾದ ಕೂಡಲೇ ಅಲ್ಲಿ ಸಿಲುಕಿರುವವರ ಸಂಪರ್ಕ ಸಾಧಿಸಲಾಗುವುದೆಂಬ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಕೇಂದ್ರ ವಿದೇಶಾಂಗ ಸಚಿವರೊಂದಿಗೆ ನಾನು ಮಾತನಾಡಿದ್ದೇನೆ, ಉಕ್ರೇನ್ ರಾಯಭಾರ ಕಚೇರಿಯೊಂದಿಗೂ ಈ ಸಂಬಂಧ ಮಾತನಾಡಲಾಗಿದೆ ಎಂದರು.

ಶಿಕಾರಿಪುರದಲ್ಲಿ ರೈತರ ಸಭೆಯಲ್ಲಿ ಪಾಲ್ಗೊಂಡು,ನಂತರ ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಅವರ ತಂದೆಯವರನ್ನು ಭೇಟಿಯಾಗಿ ಸರ್ಕಾರದಿಂದ ನವೀನ್ ಕುಟುಂಬಕ್ಕೆ ಪರಿಹಾರ ಕೊಡಲು ನಿರ್ಧರಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಪಾದಯಾತ್ರೆ ಮಾಡಿದ್ದಕ್ಕಾಗಿ ಮೇಕೆದಾಟು ಯೋಜನೆಗೆ ಬಜೆಟ್‍ನಲ್ಲಿ ಒಂದು ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ವಿಧಾನಸಭೆಯಲ್ಲೇ ತಕ್ಕ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.