ನಿಗದಿತ ಅವಧಿಯಲ್ಲಿ ಬಜೆಟ್ ಯೋಜನೆಗಳು ಸಂಪೂರ್ಣ -ಬೊಮ್ಮಾಯಿ

ಹುಬ್ಬಳ್ಳಿ: ಪ್ರಸಕ್ತ ಬಜೆಟ್‍ನಲ್ಲಿ ನೀಡಲಾದ ಯೋಜನೆಗಳನ್ನು ನಿಗದಿತ ಅವಧಿಯಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹುಬ್ಬಳ್ಳಿಯ ಗೋಕಲ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಧಾರವಾಡ-ಬೆಳಗಾವಿ ರೈಲ್ವೆ ಕಾಮಗಾರಿಯನ್ನು ಆದಷ್ಟು ಬೇಗನೇ ಆರಂಭಿಸಲಾಗುತ್ತದೆ, ಜಯದೇವ ಹೃದ್ರೋಗ ಸಂಸ್ಥೆಯನ್ನು ಹುಬ್ಬಳಿಗೆ ತಂದಿದ್ದೇವೆ. ಇದು ಈ ಭಾಗದ ಜನರಿಗೆ ಉತ್ತಮ ಸೌಲಭ್ಯ ನೀಡಲಿದೆ ಎಂದು ಹೇಳಿದರು.

ಯುವಕರಿಗೆ ಉದ್ಯೋಗಾವಕಾಶ ನೀಡಿಕೆಗಾಗಿ ಎಫ್‍ಎಮ್‍ಸಿ ಕ್ಲಸ್ಟರ್ ಕೂಡ ಬೇಗನೇ ಕಾರ್ಯಾರಂಭ ಮಾಡಲಿದೆ ಎಂದು ಅವರು ಹೇಳಿದರು.

ಅಪರಾಧ ಶೋಧನೆಯಲ್ಲಿ ಎಫ್‍ಎಸ್‍ಎಲ್ ಮಹತ್ವದ ಪಾತ್ರವಹಿಸುತ್ತದೆ. ಇದುವರೆಗೆ ಈ ಕೇಂದ್ರ ಬೆಂಗಳೂರಿನಲ್ಲಿ ಮಾತ್ರ ಇತ್ತು, ವರದಿ ಬರಲು ತಿಂಗಳುಗಟ್ಟಲೆ ಕಾಯುವುದು ಅನಿವಾರ್ಯವಾಗಿತ್ತು ಹೀಗಾಗಿ ಹುಬ್ಬಳ್ಳಿಯಲ್ಲಿ ಆರಂಭಿಸಲಾಗಿರುವ ಪ್ರಾದೇಶಿಕ ಎಫ್‍ಎಸ್‍ಎಲ್ ಕೇಂದ್ರ ಹೆಚ್ಚು ಅನುಕೂಲಕರವಾಗಲಿದೆ ಎಂದು  ಹೇಳಿದರು.

ಜಾರ್ಖಂಡನ ಒಂದು ಹಳ್ಳಿ ಸೈಬರ್ ಅಪರಾಧಗಳಿಗೆ ಹೆಸರುವಾಸಿಯಾಗಿದ್ದು ಅಲ್ಲಿನವರು ಕ್ಷಣಮಾತ್ರದಲ್ಲಿ ನಿಮ್ಮ ಅಕೌಂಟ್ ಹ್ಯಾಕ್ ಮಾಡುತ್ತಾರೆ.

ನಮ್ಮ ಪೊಲೀಸರು ಅತೀಹೆಚ್ಚು ಅಪರಾಧಗಳನ್ನು ಶೋಧಿಸುವ ಕೆಲಸಮಾಡುತ್ತಿದ್ದು ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಿಎಂ ಹೇಳಿದರು.