ಬೆಂಗಳೂರು: ನ್ಯಾನೋ ತಂತ್ರಜ್ಞಾನದ ಮೂಲಕ ತಯಾರಿಸಿರುವ ನ್ಯಾನೋ ಯೂರಿಯಾ ರಸಗೊಬ್ಬರವು ಪರೀಕ್ಷಾ ಹಂತದಲ್ಲಿ ಯಶಸ್ವಿಯಾಗಿದ್ದು, ಇದು ಮುಂಬರುವ ದಿನಗಳಲ್ಲಿ ರೈತರ ಬದುಕನ್ನು ಹಸನಾಗಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವರ್ಚುಯಲ್ ಮಾದರಿಯಲ್ಲಿ ಏರ್ಪಡಿಸಿರುವ ಮೂರು ದಿನಗಳ 12ನೇ ವರ್ಷದ `ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ’ವನ್ನು ಸೋಮವಾರ ಉದ್ಘಾಟಿಸಿ, ಅವರು ಮಾತನಾಡಿದರು.
ನ್ಯಾನೋ ಯೂರಿಯಾವನ್ನು ರಾಜ್ಯದ ಎಲ್ಲ ಕೃಷಿ ವಿ.ವಿ.ಗಳಲ್ಲಿ ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಳ್ಳೆಯ ಫಲಿತಾಂಶ ಬಂದಿದೆ ಇದು ಮುಂಬರುವ ದಿನಗಳಲ್ಲಿ ಕೃಷಿಕರ ಅವಿಭಾಜ್ಯ ಅಂಗವಾಗಲಿದ್ದು, ನ್ಯಾನೋ ತಂತ್ರಜ್ಞಾನ ಬದುಕಿನಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ ಎಂದು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನಗಳ ಮೂಲಕ ಜನಜೀವನವನ್ನು ಸುಧಾರಿಸಬೇಕು ಎಂಬುದು ಪ್ರಧಾನಿ ಮೋದಿಯವರ ಕನಸೂ ಆಗಿದೆ ಎಂದು ತಿಳಿಸಿದರು.
ಹೀಗಾಗಿ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರವು ನ್ಯಾನೋ ತಂತ್ರಜ್ಞಾನದ ತೊಟ್ಟಿಲು ಆಗಬೇಕು. ಇದಕ್ಕೆ ಸರಕಾರ ಸಂಪೂರ್ಣ ಸಹಕಾರ ನೀಡಲಿದೆ ಹಾಗೂ ಅಗತ್ಯ ನೀತಿಗಳನ್ನು ರೂಪಿಸಲಿದೆ ಎಂದು ಸಿಎಂ ಆಶ್ವಾಸನೆ ನೀಡಿದರು.
ಬೆಂಗಳೂರಿನಲ್ಲಿ ಸರಕಾರಿ ಮತ್ತು ಖಾಸಗಿ ವಲಯ ಎರಡೂ ಸೇರಿ ವಿಶ್ವದರ್ಜೆಯ 180 ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿವೆ. ಇವು ನ್ಯಾನೋ ತಂತ್ರಜ್ಞಾನವನ್ನು ಜನರ ಬಳಿಗೆ ಕೊಂಡೊಯ್ಯಲಿವೆ ಎಂದು ಬೊಮ್ಮಾಯಿ ಹೇಳಿದರು.
ಒಂದು ಅಣುವಿನಲ್ಲಿರುವ ಅಗಾಧ ಶಕ್ತಿಯನ್ನು ಮನುಕುಲದ ಒಳಿತಿಗೆ ಹೇಗೆ ಉಪಯೋಗಿಸಿಕೊಳ್ಳಬಹುದು ಎನ್ನುವುದೇ ನ್ಯಾನೋ ತಂತ್ರಜ್ಞಾನದ ವೈಶಿಷ್ಟ್ಯವಾಗಿದೆ. ಹೀಗಾಗಿ ಇದು ಸೀಡ್ ತಂತ್ರಜ್ಞಾನ ವಾಗಿದ್ದು, ಸುಸ್ಥಿರತೆ ಮತ್ತು ಅವಕಾಶ ಎರಡನ್ನೂ ಹೊತ್ತು ತರಲಿದೆ ಎಂದು ಬೊಮ್ಮಾಯಿ ಪ್ರತಿಪಾದಿಸಿದರು.
ಸಮಾವೇಶದಲ್ಲಿ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, `ಸರಕಾರವು ಸದ್ಯದಲ್ಲೇ ಸಮಗ್ರ ನ್ಯಾನೋ ತಂತ್ರಜ್ಞಾನ ನೀತಿಯನ್ನು ಹೊರತರಲಿದೆ. ಈ ಮೂಲಕ ಸಂಶೋಧನಾ ಮತ್ತು ಔದ್ಯಮಿಕ ವಲಯಗಳೆರಡನ್ನೂ ಪರಸ್ಪರ ಹತ್ತಿರಕ್ಕೆ ತರಲಾಗುವುದು. ಇದರಿಂದಾಗಿ, ನ್ಯಾನೋ ತಂತ್ರಜ್ಞಾನದ ಲಾಭವು ಸಮಾಜಕ್ಕೆ ಸಿಗಲಿದೆ’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಂಜಾವೂರಿನ ಶಾಸ್ತ್ರ ವೈಜ್ಞಾನಿಕ ಅಧ್ಯಯನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎಸ್. ಸ್ವಾಮಿನಾಥನ್ ಅವರಿಗೆ ಪ್ರತಿಷ್ಠಿತ ಸಿಎನ್ಆರ್ ರಾವ್ ವಿಜ್ಞಾನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

