ಉಕ್ರೇನ್ ನಿಂದ ನವೀನ್ ಮೃತದೇಹ ತರಲು ಸತತ ಪ್ರಯತ್ನ -ಬೊಮ್ಮಾಯಿ

ಬೆಂಗಳೂರು: ಉಕ್ರೇನ್‍ನಲ್ಲಿ ಸಾವನ್ನಪ್ಪಿದ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹವನ್ನು ತಾಯ್ನಾಡಿಗೆ ತರುವ ಪ್ರಯತ್ನ ಮುಂದುವರೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನ ಕೀವ್‍ನಲ್ಲಿ ನವೀನ್ ಮೃತದೇಹವನ್ನು ಸುರಕ್ಷಿತವಾಗಿ ಕೆಡದಂತೆ ಇಡಲಾಗಿದೆ. ಪರಿಸ್ಥಿತಿ ನೋಡಿಕೊಂಡು ಹುಟ್ಟೂರಿಗೆ ತರಲಾಗುವುದು ಎಂದು ತಿಳಿಸಿದರು.

ನಾನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಹೇಗಾದರೂ ಮಾಡಿ ಮೃತದೇಹವನ್ನು ಅವರ ಹುಟ್ಟೂರಿಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದ್ದೇವೆ ಎಂದರು.

ಉಕ್ರೇನ್‍ನ ಕೆಲವು ಪ್ರಮುಖ ನಗರಗಳಲ್ಲಿ ನಿರಂತರವಾಗಿ ಬಾಂಬ್ ದಾಳಿ, ಶೆಲ್ ದಾಳಿ, ಗುಂಡಿನ ಚಕಮಕಿ ನಡೆಯುತ್ತಲೇ ಇದೆ. ಪರಿಸ್ಥಿತಿ ನೋಡಿಕೊಂಡು ಮೃತದೇಹ ತರಲಾಗುವುದು ಎಂದು ತಿಳಿಸಿದರು.

ಬಾಂಬೆ ಹೈಕೋರ್ಟ್ ಮಾಸ್ಕ್ ಹಾಕುವುದನ್ನು ರದ್ದುಪಡಿಸಿ ನೀಡಿರುವ ತೀರ್ಪಿನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಇದೇ ವೇಳೆ ಬೊಮ್ಮಾಯಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಕುರಿತಂತೆ ಪ್ರತಿಕ್ರಿಯಿಸಿದ ಸಿಎಂ,  ಐದು ರಾಜ್ಯಗಳ ಪೈಕಿ 4 ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.