ಒಂದು ವರ್ಷದಲ್ಲಿ 30 ಸಾವಿರ ಮಹಿಳಾ ಉದ್ಯಮಿಗಳಿಗೆ ಮನ್ನಣೆ -ಅಶ್ವತ್ಥನಾರಾಯಣ

ಬೆಂಗಳೂರು: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಮುಂದಿನ ಒಂದು ವರ್ಷದಲ್ಲಿ ತಲಾ1ಸಾವಿರ ಮಹಿಳಾ ಉದ್ಯಮಿಗಳನ್ನು ಬೆಳೆಸಲು ಜೀವನೋಪಾಯ ಸಂವರ್ಧನೆ ಇಲಾಖೆಯು ತೀರ್ಮಾನಿಸಿದೆ ಎಂದು

ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಮೂಲಕ 30 ಸಾವಿರ ಸಾಧಕಿಯರನ್ನು ಗುರುತಿಸಿ, ಮುನ್ನೆಲೆಗೆ ತರಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಉತ್ತರ ಜಿಲ್ಲಾ ಘಟಕವು ಬೆಂಗಳೂರಿನ ಮಲ್ಲೇಶ್ವರಂನ ಚೌಡಯ್ಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಈ ವಿಷಯ ತಿಳಿಸಿದರು.

ಮಹಿಳೆಯರ ಸಬಲೀಕರಣಕ್ಕೆ ಉತ್ತೇಜನ ನೀಡಲು ಸ್ವಸಹಾಯ ಸಂಘಗಳಲ್ಲಿ ಸಕ್ರಿಯರಾಗಿರುವ ಸ್ತ್ರೀ ಉದ್ಯಮಿಗಳಿಗೆ ಯಾವುದೇ ಖಾತ್ರಿ ಇಲ್ಲದೆ 1ಕೋಟಿ ರೂ.ವರೆಗೂ ಬ್ಯಾಂಕ್ ಸಾಲ ಕೊಡಲಾಗುತ್ತಿದೆ.

ಜೊತೆಗೆ, ಮಹಿಳೆಯರೇ ತಯಾರಿಸುವ ಉತ್ಪನ್ನಗಳಿಗೆ ಸರಕಾರವೇ ಇ-ಕಾಮರ್ಸ್ ವೇದಿಕೆಯನ್ನು ಒದಗಿಸಲಿದೆ ಎಂದು ಹೇಳಿದರು.

ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ತರಹದ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮಾರುಕಟ್ಟೆ ಸೃಷ್ಟಿಸಲಾಗುತ್ತಿದೆ ಎಂದು ತಿಳಿಸಿದರು.

ಡಿಜಿಟಲೀಕರಣದ ಈ ಯುಗದಲ್ಲಿ ಮಹಿಳೆಯರು ವೈದ್ಯಕೀಯ, ಶಿಕ್ಷಣ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ಮನೆಯಿಂದಲೇ ಸೇವೆ ಸಲ್ಲಿಸಬಹುದು. ಕೋವಿಡ್ ಸಾಂಕ್ರಾಮಿಕವು ಅನೇಕ ತೊಂದರೆಗಳನ್ನು ಸೃಷ್ಟಿಸಿದರೂ ಕೆಲವು ಸುಧಾರಣೆಗಳಿಗೂ ದಾರಿ ಮಾಡಿಕೊಟ್ಟಿದೆ. ಮಹಿಳೆಯರ ಸಬಲೀಕರಣದಲ್ಲಿ ಆಧುನಿಕ ತಂತ್ರಜ್ಞಾನದ ಪಾತ್ರ ನಿರ್ಣಾಯಕ ಮತ್ತು ಕ್ರಾಂತಿಕಾರಕವಾಗಿದೆ ಎಂದು ಸಚಿವರು ಹೇಯ

ಸಮಾಜದ ಆಧಾರಸ್ತಂಭವಾಗಿರುವ ಮಹಿಳೆಯರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಮನೆಮನೆಗೂ 24/7 ಕುಡಿಯುವ ನೀರನ್ನು ಜಲಜೀವನ್ ಮಿಷನ್ ಮತ್ತು ಮನೆಮನೆಗೆ ಗಂಗೆ ಯೋಜನೆಗಳಡಿ ಒದಗಿಸಲಾಗುತ್ತಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.