ಎಂಬಿಬಿಎಸ್; ಖಾಸಗಿ ಕಾಲೇಜುಗಳ ದುಬಾರಿ ಶುಲ್ಕ ಕಡಿತಕ್ಕೆ ನಿರ್ಧಾರ

ಬೆಂಗಳೂರು: ಎಂಬಿಬಿಎಸ್ ಓದಲು ದುಬಾರಿ ಶುಲ್ಕ ಪಡೆಯುವ ಖಾಸಗಿ ಕಾಲೇಜುಗಳ ಹಣದಾಹಕ್ಕೆ ಕಡಿವಾಣ ಹಾಕಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಖಾಸಗಿ ಕಾಲೇಜುಗಳ ಹಣದಾಹದಿಂದ ಬೇಸತ್ತ ನೂರಾರು ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳ ಮೊರೆ ಹೋಗುತ್ತಿದ್ದಾರೆ.

ಖಾಸಗಿ ಕಾಲೇಜುಗಳು ಕೇಳುವ ಹಣಕ್ಕಿಂತ ತೀರ ಕಡಿಮೆ ಶುಲ್ಕ ಪಡೆಯುತ್ತಿದ್ದ ಉಕ್ರೇನ್ ಕಾಲೇಜುಗಳಲ್ಲಿ ನೂರಾರು ಕನ್ನಡಿಗರು ವ್ಯಾಸಂಗ ಮಾಡುತ್ತಿದ್ದರು.

ಈಗ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿರುವುದರಿಂದ ಉಕ್ರೇನ್ ವಿವಿಗಳಲ್ಲಿ ಎಂಬಿಬಿಎಸ್ ಮಾಡುತ್ತಿದ್ದ ಸಾವಿರಾರು ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ.

ಈ ಹಿಂದೆ ಕೂಡ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದ್ದರೂ ಅದು ಸಾಧ್ಯವಾಗಿರಲಿಲ್ಲ.

ಉಕ್ರೇನ್ ನಿಂದ ಸಾವಿರಾರು ವಿದ್ಯಾರ್ಥಿಗಳು ವಾಪಸ್ಸಾಗಿರುವುದರಿಂದ ಇಲ್ಲಿನ ಖಾಸಗಿ ಕಾಲೇಜುಗಳ ಹಣದಾಹಕ್ಕೆ ಕಡಿವಾಣ ಹಾಕಿ ಪ್ರತಿಭಾವಂತ ವಿದ್ಯಾರ್ಥಿಗಳು ವಿದೇಶಗಳಿಗೆ ಪಲಾಯನ ಮಾಡುವುದನ್ನು ತಪ್ಪಿಸಿ ಇಲ್ಲೆ ವ್ಯಾಸಂಗ ಮಾಡುವಂತೆ ಮಾಡಲಾಗುತ್ತಿದೆ.

ಸರ್ಕಾರ ವಿಧಿಸುವ ಮೊತ್ತಕ್ಕಿಂತ ಹೆಚ್ಚುವರಿ ಶುಲ್ಕ ಪಡೆಯಬಾರದು ಹಾಗೂ ಎಲ್ಲ ಶುಲ್ಕದ ವಿವರಗಳನ್ನು ಕೆಇಎ ವೆಬ್‍ಸೈಟ್‍ನಲ್ಲಿ ಪ್ರದರ್ಶಿಸಬೇಕು ಎಂಬ ಆದೇಶವನ್ನು ಹೊರಡಿಸಲಾಗಿದೆ.

ಎಂಬಿಬಿಎಸ್ ಶುಲ್ಕದ ಮಾಹಿತಿ ಪ್ರತಿಯೊಬ್ಬರಿಗೂ ತಿಳಿಯುವಂತೆ ವೆಬ್‍ಸೈಟ್‍ನಲ್ಲಿ ಪ್ರಕಟಿಸಲು ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು  ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ

ಪ್ರತಿ ಬಾರಿ ಎಂಬಿಬಿಎಸ್ ಶುಲ್ಕವನ್ನು ನಾವೇ ನಿಗಧಿ ಪಡಿಸುತ್ತೇವೆ. ಆದರೆ, ಖಾಸಗಿ ಕಾಲೇಜುಗಳು ಸರ್ಕಾರಿ ಶುಲ್ಕದ ಜೊತೆಗೆ ಇತರೆ ಶುಲ್ಕ ಸೇರಿಸಿ ಲಕ್ಷಾಂತರ ರೂ ಫೀ ಪಡೆಯುತ್ತಿದ್ದಾರೆ.

ಖಾಸಗಿ ಕಾಲೇಜುಗಳ ಹಣದಾಹಕ್ಕೆ ಕಡಿವಾಣ ಹಾಕಿ, ಶುಲ್ಕದ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಪ್ರದರ್ಶಿಸುವಂತೆ ಉನ್ನತ ಶಿಕ್ಷಣ ಇಲಾಖೆಗೆ ನಾವು ಮನವಿ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ನಮ್ಮ ಮನವಿಯನ್ನು ಮನ್ನಿಸಿದರೆ ಮುಂದಿನ ಶೈಕ್ಷಣಿಕ ವರ್ಷದಿಂದಲೆ ಈ ವ್ಯವಸ್ಥೆ ಜಾರಿಗೆ ಬರಲಿದೆ  ಎಂದು ರಮ್ಯಾ ತಿಳಿಸಿದ್ದಾರೆ.