ಬೆಂಗಳೂರು: ತಾವು ನಿರ್ವಹಿಸುತ್ತಿರುವ ಖಾತೆಗೂ, ಪಕ್ಷಕ್ಕೂ ನ್ಯಾಯ ನೀಡದೆ ಹೊರೆ ಆಗಿರುವ ಸಚಿವರ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ವಿಧಾನಸೌಧದ ಬಳಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ರವಿ ಮಾತನಾಡಿದರು.
ಸಚಿವ ಸ್ಥಾನ ನಿಭಾಯಿಸುತ್ತಿರುವ ಕೆಲವರು ತಾವು ನಿರ್ವಹಿಸುತ್ತಿರುವ ಖಾತೆಗೂ, ತಾವಿರುವ ಪಕ್ಷಕ್ಕೂ ನ್ಯಾಯ ಒದಗಿಸದೆ ಅನಗತ್ಯ ಹೊರೆ ಆಗಿದ್ದಾರೆ ಅಂತವರ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ನಿಗಮ ಮಂಡಳಿ ನೇಮಕ ವಿಳಂಬಕ್ಕೆ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ವಿಳಂಬದಿಂದ ಹಲವರು ಪರಿಸ್ಥಿತಿಯ ಲಾಭ ಪಡೆದು ಎಂಜಾಯ್ ಮಾಡುತ್ತಿದ್ದಾರೆ. ಪಕ್ಷಕ್ಕೆ ಯಾವುದೇ ಕೊಡುಗೆ ನೀಡದವರನ್ನು ಹುದ್ದೆಯಿಂದ ಕೈಬಿಡಬೇಕು ಎಂದು ಸಿ.ಟಿ.ರವಿ ಹೇಳಿದರು.
ನಿಗಮ ಮಂಡಳಿಗಳಿಗೆ ಈಗಾಗಲೇ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಆಗಬೇಕಿತ್ತು. ಈವರೆಗೆ ಯಾಕೆ ಆಗಿಲ್ಲ ಎಂಬುದು ಗೊತ್ತಿಲ್ಲ ಎಂದರು.
ಬಿ.ವೈ.ವಿಜಯೇಂದ್ರ ಅವರಿಗೆ ನೀಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹುದ್ದೆ ಸಣ್ಣದಲ್ಲ. ಅದನ್ನು ಸಣ್ಣ ಹುದ್ದೆ ಎಂದು ಪರಿಗಣಿಸಿದರೆ ಏನು ಹೇಳಬೇಕೋ ಗೊತ್ತಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ನವರಿಗೆ ಸೋಲಿನ ಮೇಲೆ ಸೋಲಾದರೂ, ಅವಮಾನವಾದರೂ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಬೇಕೆಂದು ಹೇಳಿದ್ದಾರೆ ಕಾಂಗ್ರೆಸ್‍ನವರಿಗೆ ಹಳೆಗಂಡನ ಪಾದವೇ ಗತಿ ಎಂದು ಟೀಕಿಸಿದರು.

