ಬೆಂಗಳೂರು: ಹಿರಿಯ ಮುತ್ಸದ್ದಿ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವವನ್ನು ವರ್ಷವಿಡಿ ಆಚರಿಸುವುದಲ್ಲದೆ ಅವರ ಹೆಸರಿನಲ್ಲಿ ಶ್ರೇಷ್ಠ ಕೃಷಿಕ ಮತ್ತು ಶ್ರೇಷ್ಠ ಶಾಸಕ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಬೆಬೆಂಗಳೂರಿನಲ್ಲಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ವಿಧಾನಸಭೆ, ವಿಧಾನಪರಿಷತ್‍ನಲ್ಲಿ ಶ್ರೇಷ್ಠ ಶಾಸಕ ಪ್ರಶಸ್ತಿ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.
ಗೋಪಾಲಗೌಡರ ಕೃತಿಗಳನ್ನು ಮುದ್ರಿಸಿ ಎಲ್ಲ ಗ್ರಂಥಾಲಯಕ್ಕೂ ತಲುಪಿಸಲಾಗುವುದು. ಭೂ ಸುಧಾರಣೆ ಕಾಯ್ದೆಗಾಗಿ ನಡೆದ ಹೋರಾಟದ ಬಗ್ಗೆ ಸರ್ಕಾರದ ವತಿಯಿಂದ ಸಂಶೋಧಿತ ಸಂಪುಟಗಳನ್ನು ಹೊರತಂದು ಜನ್ಮಶತಮಾನೋತ್ಸವ ಸಮಾರೋಪದಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ಸಿಎಂ ಹೇಳಿದರು.
ಗೋಪಾಲಗೌಡರು ಮುಖ್ಯಮಂತ್ರಿ ಸ್ಥಾನಕ್ಕಿಂತ ಮೀರಿದ ವ್ಯಕ್ತಿತ್ವವುಳ್ಳವರಾಗಿದ್ದರು.ಅವರ ಚಿಂತನೆ, ಪ್ರೇರಣೆ, ಭವಿಷ್ಯ ನಿರ್ಮಾಣದಲ್ಲಿ ಮಾರ್ಗದರ್ಶನ ದಾರಿದೀಪವಾಗಿದೆ ಎಂದು ಹೇಳಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಎಸ್.ಟಿ.ಸೋಮಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

