ಹಿಜಾಬ್ ಕುರಿತು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ -ಅರಗ ಜ್ಞಾನೇಂದ್ರ

ಬೆಂಗಳೂರು: ಹಿಜಾಬ್ ಕುರಿತಂತೆ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಸಚಿವರು,ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ನೀಡಿದ ಸೂಚನೆಯ ಪರವಾಗಿ ತೀರ್ಪು ಬಂದಿದೆ. ಈ ತೀರ್ಪು ಎಲ್ಲರಿಗೂ ಸಂತೋಷ ತಂದಿದೆ ತಿಳಿಸಿದರು.

ಹೆಣ್ಣು ಮಕ್ಕಳು ಸಹ ಶಿಕ್ಷಣ ಪಡೆಯುವ ಹಕ್ಕನ್ನು ಎತ್ತಿ ಹಿಡಿದಿದೆ. ಈ ತೀರ್ಪು ನೀಡಿದ್ದಕ್ಕಾಗಿ ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ದೇಶ ವಿದೇಶಗಳೂ ಕೂಡಾ ಈ ವಿವಾದವನ್ನು ಗಮನಿಸುತ್ತಿದ್ದವು ಎಂದು ಹೇಳಿದರು.

ವಿದ್ಯಾರ್ಥಿಗಳು ಧರ್ಮ-ಮತ ಎಂದು ತಲೆಯಲ್ಲಿ ತುಂಬಿಕೊಳ್ಳದೆ  ಸಹೋದರ ತತ್ವದಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಭಾರತ ಮಾತೆಯ ಮಕ್ಕಳಾಗಿ ಸಂಸ್ಕಾರವಂತರಾಗಬೇಕು. ಸಂಸ್ಕಾರ ನೀಡುವ ಸಮವಸ್ತ್ರ ಧರಿಸಬೇಕು. ಎಲ್ಲರೂ ಶಾಂತಿ ಸಂಯಮ ಕಾಪಾಡಬೇಕು ಎಂದು ಗೃಹ ಸಚಿವರು ಮನವಿ ಮಾಡಿದರು.

ಈಗಾಗಲೇ ಅಶಾಂತಿಗೆ ಆಸ್ಪದ ಕೊಡದ ರೀತಿಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೇಂದ್ರ ಕಂಪೆನಿಯನ್ನು ಕರೆಸಲಾಗಿದೆ ಎಂದು ತಿಳಿಸಿದರು.

ಒಂದು ವೇಳೆ ಯಾರಾದರೂ ಶಾಂತಿಗೆ ಧಕ್ಕೆ ತಂದರೆ ಆಗತ್ಯ ಕ್ರಮ ವಹಿಸುತ್ತೇವೆ ಎಂದು ಎಚ್ಚರಿಸಿದರು.

ಕೋವಿಡ್‍ನಿಂದಾಗಿ ಕಳೆದ 2 ವರ್ಷಗಳಿಂದ ಸರಿಯಾದ ಶಿಕ್ಷಣ ದೊರೆತಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಹೆಚ್ಚು ಗಮನ ಹರಿಸಬೇಕು ಎಂದು ಆರಗ ಜ್ಞಾನೇಂದ್ರ ತಿಳಿಸಿದರು.