ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವಿಕೆ ಕುರಿತಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರತಿಯೊಬ್ಬರು ಗೌರವಿಸಿ ಮತ್ತೆ ಮುಂದುವರೆಸದೆ ಇಲ್ಲಿಗೆ ಪೂರ್ಣ ವಿರಾಮ ಹಾಕಬೇಕೆಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಧರ್ಮಕ್ಕಿಂತ ಸಂವಿಧಾನ ದೊಡ್ಡದು ಎಂದು ಹೈಕೋರ್ಟ್ ತ್ರಿಸದಸ್ಯ ಪೀಠ ನೀಡಿರುವ ಐತಿಹಾಸಿಕ ತೀರ್ಪನ್ನು ನಾವೆಲ್ಲರೂ ಗೌರವಿಸೋಣ ಎಂದು ಹೇಳಿದರು.
ಇದು ಯಾರ ಪರ, ವಿರೋಧದ ತೀರ್ಪಲ್ಲ. ನ್ಯಾಯಾಲಯ ನೀಡಿರುವ ತೀರ್ಪನ್ನು ನಾವೆಲ್ಲರೂ ಗೌರವಿಸೋಣ ಎಲ್ಲರೂ ಸೌಹಾರ್ದಯುತವಾಗಿ ಬದುಕೋಣ ಎಂದು ತಿಳಿಸಿದರು.
ಈಗಾಗಲೇ ಪರೀಕ್ಷೆಗಳು ಆರಂಭವಾಗುತ್ತಿವೆ. ಕೋವಿಡ್ ಕಾರಣದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಪುನಃ ಇದನ್ನು ಮುಂದುವರೆಸುವುದರಲ್ಲಿ ಅರ್ಥವಿಲ್ಲ ಎಂದರು.
ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕೋಣ. ಮಕ್ಕಳಲ್ಲಿ ನಾವು ಸೌಹಾರ್ದತೆ, ಭಾತೃತ್ವ ಬೆಳೆಸೋಣ. ಹೆಚ್ಚು ವಿವಾದ ಬೆಳೆಸುವುದರಲ್ಲಿ ಅರ್ಥವಿಲ್ಲ.ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಯಾರಿಂದಲೂ ಆಗಬಾರದು ಎಂದು ಕಿವಿಮಾತು ಹೇಳಿದರು.

