ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧಾರಣೆ ನಿರ್ಬಂಧ ಮಾಡಿರುವ ಸರ್ಕಾರದ ಆದೇಶ ಎತ್ತಿ ಹಿಡಿದಿರುವ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುವುದಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿ ಕ್ರಿಯೆ ನೀಡಿದ ಅವರು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕಲ್ಲ ಎಂದು ನಾವು ಪ್ರಬಲ ವಾದ ಮಂಡಿಸಿದ್ದೆವು. ಈ ವಾದವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ ಎಂದು ತಿಳಿಸಿದರು.
ನಾಲ್ಕು ಪ್ರಮುಖ ಅಂಶಗಳನ್ನು ಪರಿಗಣಿಸಿ ತೀರ್ಪನ್ನು ನೀಡಲಾಗಿದೆ. ಹಿಜಾಬ್ ಇಸ್ಲಾಂನ ಧಾರ್ಮಿಕ ಅತ್ಯವಶ್ಯಕ ಆಚರಣೆಯಲ್ಲ. ಯಾವುದಾದರೂ ಅತ್ಯಗತ್ಯ ಆಚರಣೆಯಾಗಬೇಕಾದರೆ ಅದಕ್ಕೆ ದಾಖಲೆ ಕೊಡಬೇಕು.
ಇದನ್ನು ಗಣನೆಗೆ ತೆಗೆದುಕೊಂಡು ಯಾವುದೇ ಪುರಾವೆ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ವಜಾಗೊಳಿಸಿದೆ ಎಂದು ಹೇಳಿದರು.
ಅಲ್ಲದೆ, ಹಿಜಾಬ್ ಧರಿಸುವ ಪರವಾಗಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ನಾವಡಗಿ ತಿಳಿಸಿದರು.

