ರಾಜ್ಯದ 18 ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹದಳದ ಪೊಲೀಸರು ಬುಧವಾರ ಮುಂಜಾನೆ ರಾಜ್ಯಾದ್ಯಂತ 18 ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಹಚ್ಚಿದ್ದಾರೆ.

18 ಅಧಿಕಾರಿಗಳ 75 ಸ್ಥಳಗಳ ಮೇಲೆ ನೂರು ಎಸಿಬಿ ಅಧಿಕಾರಿಗಳು ಹಾಗೂ 300 ಸಿಬ್ಬಂದಿ ಏಕಕಾಲಕ್ಕೆ ಈ ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ಜ್ಞಾನೇಂದ್ರ ಕುಮಾರ್, ಬಿಡಿಎ ನಗರ ಯೋಜನಾ ವಿಭಾಗದ ಅಧಿಕಾರಿ ರಾಕೇಶ್‍ಕುಮಾರ್, ಕೈಗಾರಿಕಾ ಮತ್ತು ವಾಣಿಜ್ಯ ವಿಭಾಗದ ಹೆಚ್ಚುವರಿ ನಿರ್ದೆಶಕ ಬಿ.ಕೆ.ಶಿವಕುಮಾರ್ ಅವರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿ ಲೆಕ್ಕ ಹಾಕುತ್ತಿದ್ದಾರೆ.

ಯಾದಗಿರಿಯ ಆರ್‍ಎಫ್‍ಒ ರಮೇಶ್ ಕಂಕಟ್ಟೆ, ಗೋಕಾಕ್‍ನ ಕೌಜಲಗಿ ವಿಭಾಗದ ಕಾರ್ಯಪಾಲಕ ಅಭಿಯಂತರ ಬಸವರಾಜ್ ಶೇಖರ್‍ರೆಡ್ಡಿ ಪಾಟೀಲ್, ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿರಸ್ತೆದಾರರಾಗಿರುವ ಬಸವಕುಮಾರ್ ಎಸ್. ಅಣ್ಣಿಗೆರೆ, ವಿಜಯಪುರದ ನಿರ್ಮಿತಿ ಕೇಂದ್ರದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಗೋಪಿನಾಥ್ ಸಾ ಎನ್.ಮಳಗಿ, ಬದಾಮಿಯ ಆರ್‍ಎಫ್‍ಒ ಶಿವಾನಂದ್ ಪಿ.ಶರಣಪ್ಪ ಕೇದಗಿ ಅವರ ನಿವಾಸಗಳ ಮೇಲೂ ಎಸಿಬಿ ಪೊಲೀಸರು ದಾಳಿ ನಡೆಸಿದರು.

ರಾಮನಗರದ ಸಹಾಯಕ ಆಯುಕ್ತ ಮಂಜುನಾಥ್, ಸೋಷಿಯಲ್ ವೆಲ್ ಫೇರ್  ಇಲಾಖೆಯ ಜನರಲ್ ಮ್ಯಾನೇಜರ್ ಶ್ರೀನಿವಾಸ್, ದಾವಣಗೆರೆಯ ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ, ಗುಂಡ್ಲುಪೇಟೆಯ ಅಬಕಾರಿ ಇನ್ಸ್‌ಪೆಕ್ಟರ್ ಚಲುವರಾಜ್, ಹಾವೇರಿಯ ಎಪಿಎಂಸಿ ಸಹಾಯಕ ಅಭಿಯಂತರ ಕೃಷ್ಣನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉಪವಿಭಾಗದ ಸಹಾಯಕ ಅಭಿಯಂತರ ಗಿರೀಶ್,

ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಚ್.ಎನ್.ಬಾಲಕೃಷ್ಣ, ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆಯ ಎಇಇ ಗವಿರಂಗಪ್ಪ, ರಾಯಚೂರಿನ ಕೃಷ್ಣಭಾಗ್ಯ ಜಲನಿಗಮದ ಎಇಇ ಅಶೋಕ್‍ರೆಡ್ಡಿ ಪಾಟೀಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಪಿಟಿಸಿಎಲ್ ಎಇಇ ದಯಾಸುಂದರ್‍ ರಾಜು ಎಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಭ್ರಷ್ಟ ಅಧಿಕಾರಿಗಳು.