ಬೆಂಗಳೂರು : ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕಥಾವಸ್ತು, ಸಿನಿಮಾದಲ್ಲಿ ತೋರಿಸಿರುವ ವಿಚಾರಗಳು ಅನೇಕ ಚರ್ಚೆಗಳನ್ನು ಹುಟ್ಟುಹಾಕಿವೆ.
ಇಂತಹ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡದವರು ದೇಶವಿರೋಧಿಗಳು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದ ನಂತರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು ವಿಕೃತ ಮನಸ್ಸಿನವರು ಎಂದು ಟೀಕಿಸಿದರು.
ಸ್ಪೀಕರ್ ಅವರೆ ಆಹ್ವಾನಿಸಿದ್ದರಿಂದ ಸೌಜನ್ಯಕ್ಕಾದರೂ ಸಿನಿಮಾಗೆ ಬರಬೇಕಿತ್ತು. ಇಲ್ಲಿರುವವರು ವೋಟ್ ಬ್ಯಾಂಕ್ ಹಾಗೂ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ ಜನ ಇದನ್ನ ಒಪ್ಪಲ್ಲ ಎಂದು ಹೇಳಿದರು.
ಹಿಂದುತ್ವ, ರಾಷ್ಟ್ರೀಯ ಮನೋಭಾವ, ದೇಶವನ್ನು ಪ್ರೀತಿಸುವವರು ಈ ಸಿನಿಮಾ ನೋಡಬಹುದು. ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟ ಸ್ಪೀಕರ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ರೇಣುಕಾಚಾರ್ಯ ತಿಳಿಸಿದರು.
ಕಾಶ್ಮೀರದಲ್ಲಿ ಉಗ್ರವಾದಿಗಳ ಅಟ್ಟಹಾಸ ವೀಕ್ಷಣೆ ಮಾಡುತ್ತಿದ್ದರೆ ಮೈ ಜುಮ್ ಎನ್ನುತ್ತದೆ, ಕಾಶ್ಮೀರ ಪಂಡಿತರ ಚಿತ್ರಹಿಂಸೆ, ಮಾರಣಹೋಮಕ್ಕೆ ಹಿಂದಿನ ಸರ್ಕಾರವೇ ಕಾರಣ ಎಂದು ದೂರಿದರು.
ಹಿಂದಿನ ಸರ್ಕಾರ ವೋಟಿಗೋಸ್ಕರ ಭಯೋತ್ಪಾದಕರಿಗೆ, ಉಗ್ರಗಾಮಿಗಳಿಗೆ ಬೆಂಬಲಕೊಟ್ಟಿದ್ದರಿಂದ ಮಾರಣಹೋಮ ಆಗಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ ಬಳಿಕ ಮೋದಿಯವರ ಭರವಸೆಯಂತೆ ಕಾಶ್ಮೀರದಲ್ಲಿ ಉಸಿರಾಡಲು ಅವಕಾಶ ಆಗಿದೆ ಎಂದರು.
ಪ್ರತಿಯೊಬ್ಬರೂ ಈ ಚಿತ್ರ ವೀಕ್ಷಣೆ ಮಾಡಬೇಕು. ಇಂತಹ ಸಿನಿಮಾ ವೀಕ್ಷಣೆಯಲ್ಲಿ ರಾಜಕಾರಣ, ಸ್ವಾರ್ಥ ಮುಖ್ಯವಲ್ಲ ಎಂದು ರೇಣುಕಾಚಾರ್ಯ ಕರೆ ನೀಡಿದರು.

