ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದಿಂದ ಕಾಂಗ್ರೆಸ್ ಪಕ್ಷದ ಭವಿಷ್ಯ ಮುಗಿದೇ ಹೋಗಿದೆ ಎಂದು ಭಾವಿಸಬೇಕಿಲ್ಲ. ಪಂಜಾಬ್ ಹೊರತುಪಡಿಸಿ ಉಳಿದ ನಾಲ್ಕು ಕಡೆ ಲಾಭವಾಗಿದೆ ಹಿನ್ನಡೆಯಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,ಉತ್ತರಪ್ರದೇಶದಲ್ಲಿ 200ಕ್ಕೂ ಹೆಚ್ಚು ಸಭೆಗಳು ಆಗಿವೆ. ಪ್ರಿಯಾಂಕ ಗಾಂಧಿ ಅವರು ಪಕ್ಷಕ್ಕೆ ಚೈತನ್ಯ ನೀಡಿದ್ದಾರೆ. ಪಂಜಾಬ್‍ಲ್ಲಿ ಆಡಳಿತವಿದ್ದ ಕಡೆ ಸೋಲು ಕಂಡಿದ್ದೇವೆ. ಉಳಿದ ಕಡೆ ಕಾಂಗ್ರೆಸ್ ಸೋತ ರೀತಿಯಲ್ಲಿದೆ ಎಂದು ಸಮರ್ಥಿಸಿಕೊಂಡರು.
ಬಿಜೆಪಿಯವರು ಕಾಂಗ್ರೆಸ್ ಕಥೆ ಮುಗಿಯಿತು ಎಂದು ವ್ಯಾಖ್ಯಾನಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಾವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಭವಿಷ್ಯ ನುಡಿದರು.
ದಕ್ಷಿಣ ಭಾರತದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಎಲ್ಲಿಯೂ ಬಿಜೆಪಿಗೆ ಜನ ಅವಕಾಶ ಕೊಟ್ಟಿಲ್ಲ. ಕರ್ನಾಟಕದಲ್ಲೂ ಅವಕಾಶ ನೀಡುವುದಿಲ್ಲ. ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ಕಾಂಗ್ರೆಸ್ ಕಾರ್ಯಕರ್ತರು ಎದೆಗುಂದಬೇಕಿಲ್ಲ ಎಂದು ಹೇಳಿದರು.
ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಈವರೆಗೂ 15 ಲಕ್ಷ ಸದಸ್ಯರಾಗಿದ್ದಾರೆ. ಸುಮಾರು 40ರಿಂದ 50 ಲಕ್ಷ ಸದಸ್ಯರ ನೋಂದಣಿ ಗುರಿಯಿದೆ ಎಂದು ಡಿಕೆಶಿ ತಿಳಿಸಿದರು.

