ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‍ಕುಮಾರ್ ಅವರಿಗೆ ಶೀಘ್ರದಲ್ಲೇ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪುನೀತ್ ರಾಜ್‍ಕುಮಾರ್‍ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂಬುದು ಅಭಿಮಾನಿಗಳ ಒತ್ತಾಸೆಯಾಗಿತ್ತು. ಅದರಂತೆ ನಮ್ಮ ಸರ್ಕಾರ ಅವರಿಗೆ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದೆ. ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ಯಾವ ದಿನಾಂಕದಂದು ನೀಡಬೇಕು ಎಂಬುದರ ಕುರಿತು ಅವರ ಕುಟುಂಬ ಸದಸ್ಯರ ಜೊತೆ ಚರ್ಚಿಸಲಾಗುವುದು ಎಂದರು.
ವರನಟ ಡಾ.ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ತರುವ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸುತ್ತೇವೆ. ಇದರ ಪೂರ್ವ ಸಿದ್ದತೆಗಾಗಿ ಸಮಿತಿಯೊಂದನ್ನು ರಚನೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.
ಚಿಕ್ಕ ವಯಸ್ಸಿನಲ್ಲೇ ಪುನೀತ್ ರಾಜ್‍ಕುಮಾರ್ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಅವರು ಗಳಿಸಿರುವ ಅಪಾರ ಜನಮನ್ನಣೆ ನೋಡಿದರೆ ಈಗಲೂ ಕೂಡ ಅವರು ನಮ್ಮೊಂದಿಗೆ ಇದ್ದಾರೆ ಎನಿಸುತ್ತದೆ ಎಂದರು.
ಭೌತಿಕವಾಗಿ ಅವರು ನಮ್ಮನ್ನು ಬಿಟ್ಟು ದೂರ ಇರಬಹುದು. ಆದರೆ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಬದುಕಿದ್ದರೆ ಇನ್ನೂ ಸಾಕಷ್ಟು ಸಾಧನೆಗಳನ್ನು ಮಾಡುತ್ತಿದ್ದರು. ಆದರೆ ವಿಯಾಟವೇ ಬೇರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜೇಮ್ಸ್ ಚಿತ್ರವನ್ನು ನಾನು ಕೂಡ ವೀಕ್ಷಿಸುತ್ತೇನೆ. ಪ್ರತಿಯೊಬ್ಬರು ಇದನ್ನು ವೀಕ್ಷಣೆ ಮಾಡಬೇಕೆಂದು ಬೊಮ್ಮಾಯಿ ಸಾರ್ವಜನಿಕರಿಗೆ ಮನವಿ ಮಾಡಿದರು.

