ಜೇಮ್ಸ್ ಜಾತ್ರೆಯೊಂದಿಗೆ ಅಪ್ಪು ಮಯವಾದ ಕರ್ನಾಟಕ

ಬೆಂಗಳೂರು: ಕರ್ನಾಟಕದಲ್ಲಿ ಎಲ್ಲಿ ನೋಡಿದರೆ ಅಲ್ಲಿ ಅಪ್ಪು ಅಪ್ಪು ಎಂಬ ಘೋಷಣೆ ಮೊಳಗುತ್ತಲೇ ಇದ್ದುದು ವಿಶೇಷ ವಾಗಿತ್ತು.

ಹಳ್ಳಿ, ಪಟ್ಟಣ, ನಗರಗಳ ಮೂಲೆಮೂಲೆಗಳಲ್ಲೂ ಪುನೀತ್ ರಾಜಕುಮಾರ್ ಭಾವಚಿತ್ರಗಳ ದೊಡ್ಡ ದೊಡ್ಡ ಕಟೌಟ್ ಗಳು ಹೂವುಗಳಿಂದ  ರಾರಾಜಿಸುತ್ತಿವೆ.

ಅಪ್ಪು ಇಲ್ಲದ ಮೊದಲ ಹುಟ್ಟುಹಬ್ಬ , ಇನ್ನೊಂದು ಕಡೆ ರಾಜ್ಯಾದ್ಯಂತ ಜಾತ್ರೆಯಂತಹ ವೈಭವ ಸೃಷ್ಟಿ ಮಾಡಿರುವ ಜೇಮ್ಸ್ ಚಿತ್ರ. ಹಾಗಾಗಿ ಎಲ್ಲಿ ನೋಡಿದರೂ ಅಪ್ಪು ಹೆಸರು ಮೊಳಗುತ್ತಿದೆ.

ಮನೆ ಮಗನನ್ನು ಕಳೆದುಕೊಂಡ ನೋವಿನೊಂದಿಗೆ ಮೊದಲ ಹುಟ್ಟುಹಬ್ಬವನ್ನು ಮಧ್ಯರಾತ್ರಿ, ಅಪ್ಪು ಸಮಾಧಿಯ ಬಳಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಭಾಗಿಯಾಗಿ ಕೇಕ್ ಕಟ್ ಮಾಡುವುದರ ಮೂಲಕ ಅಭಿಮಾನಿಗಳೊಂದಿಗೆ ಆಚರಿಸಿದ್ದಾರೆ.

ಸುಮಾರು 4000 ಪರದೆಗಳ ಮೇಲೆ ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ 12 ವಿದೇಶಗಳಲ್ಲಿ ತೆರೆಕಂಡು ದಾಖಲೆಗಳ ಧೂಳಿಪಟ ಮಾಡುತ್ತಿರುವ ಜೇಮ್ಸ್ ಚಿತ್ರ ಅಪ್ಪು ಅಭಿಮಾನಿಗಳಿಗೆ ಅಪ್ಪು ಕೊಟ್ಟ ಕೊನೆಯ ಉಡುಗರೆಯಾಗಿದೆ.

ಇದನ್ನು ಬಹಳ ಆಪ್ಯಾಯಮಾನವಾಗಿ ಸ್ವೀಕರಿಸುತ್ತಾ ಚಿತ್ರವನ್ನು ಯಶಸ್ವಿ ಮಾಡುವುದರ ಮೂಲಕ ಅಭಿಮಾನಿಗಳೂ ಕೂಡ ಕೊನೆಯ ವಿದಾಯವನ್ನು ಅಪ್ಪುಗೆ ಹೇಳುತ್ತಿದ್ದಾರೆ.