ಬೆಂಗಳೂರು: ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದು ಕನ್ನಡಿಗರ ಕಣ್ಮಣಿಯಾದ ಪುನೀತ್ ರಾಜ್‍ಕುಮಾರ್ ಅವರ ಜೀವನ ಗಾಥೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಪಠ್ಯವನ್ನಾಗಿ ಮಾಡುವ
ಕುರಿತು ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭರವಸೆ ನೀಡಿದ್ದಾರೆ.
ಹಲವಾರು ಸಂಘ-ಸಂಸ್ಥೆಗಳಿಂದ ಈ ಕುರಿತು ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದರು
ಚಿಕ್ಕ ವಯಸಿಸನಲ್ಲೇ ಪ್ರಶಸ್ತಿ ಪಡೆಯುವುದರ ಜತೆಗೆ ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಜರಾಮರ ಸೇವೆ ಸಲ್ಲಿಸುವ ಮೂಲಕ ಮಕ್ಕಳು ಮತ್ತು ಯುವಕರಿಗೆ ಅಪ್ಪು ದಾರಿದೀಪವಾಗಿದ್ದಾರೆ.
ಅವರ ಜೀವನ ಗಾಥೆ ಮುಂದಿನ ಜನಾಂಗಕ್ಕೆ ಮಾದರಿಯಾಗಬೇಕು ಎಂಬ ಉದ್ದೇಶದಿಂದ 4 ಅಥವಾ 5ನೆ ತರಗತಿಯ ಪಠ್ಯದಲ್ಲಿ ಅಳವಡಿಕೆ ಮಾಡಬೇಕು ಎಂದು ಹಲವಾರು ಸಂಘ-ಸಂಸ್ಥೆಗಳು ಒತ್ತಾಯಿಸಿದ್ದವು.
ಚಲನಚಿತ್ರ ನಟರಾಗಿದ್ದರೂ 26 ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮ ಹಾಗೂ 4800ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ಓದಿಗೆ ಸೂರ್ತಿಯಾಗಿದ್ದ ಪುನೀತ್ ರಾಜ್‍ಕುಮಾರ್ ಜೀವನದ ಬಗ್ಗೆ ಪ್ರಾಥಮಿಕ ಶಾಲಾ ಪುಸ್ತಕದಲ್ಲಿ ಅಳವಡಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಶಿಕ್ಷಣ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.
ಬಿಬಿಎಂಪಿ ಶಿಕ್ಷಣ ಇಲಾಖೆಗೆ ಬಂದಿದ್ದ ಸಂಘ-ಸಂಸ್ಥೆಗಳ ಮನವಿಯನ್ನು ಪಾಲಿಕೆ ಅಕಾರಿಗಳು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದರು.
ಎನ್.ಆರ್.ರಮೇಶ್ ಹಾಗೂ ಬಿಬಿಎಂಪಿಯ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾಥಮಿಕ ಶಾಲೆಯ 4 ಅಥವಾ 5ನೆ ತರಗತಿಯ ಪಠ್ಯದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಬದುಕನ್ನು ಪಠ್ಯವನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಾಗೇಶ್ ಅವರು ಭರವಸೆ ನೀಡಿದ್ದಾರೆ.

