ಬೆಂಗಳೂರು: ರಾಜ್ಯದಲ್ಲಿ ಗುಜರಾತ್ ಮಾದರಿಯಂತೆ ಪ್ರಾಥಮಿಕ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ಸಚಿವ ನಾಗೇಶ್ ಮಾತನಾಡಿ, ಈಗಾಗಲೇ ಗುಜರಾತ್ ಸರ್ಕಾರ ಪ್ರಾಥಮಿಕ ಶಾಲೆಯ ಪಠ್ಯಗಳಲ್ಲಿ ಭಗವದ್ಗೀತೆಯನ್ನು ಅಳವಡಿಸಿದೆ. ನಮ್ಮಲ್ಲೂ ಕೂಡ ಈ ಮಾದರಿಯನ್ನು ಅಳವಡಿಸುವ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು ಎಂದರು.
ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಶಿಕ್ಷಣ ತಜ್ಞರು ಇಲಾಖೆಯ ಅಕಾರಿಗಳೊಂದಿಗೆ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು
ಪಠ್ಯಗಳಲ್ಲಿ ಭವದ್ಗೀತೆಯನ್ನು ಸೇರಿಸಬಾರದೆಂಬ ನಿಯಮ ಎಲ್ಲಿಯೂ ಇಲ್ಲ. ಬೈಬಲ್ ಇರಲಿ, ಕುರಾನೇ ಇರಲಿ ಒಳ್ಳೆಯ ಅಂಶಗಳಿದ್ದರೆ ಅದನ್ನು ಅಳವಡಿಸಿಕೊಂಡರೆ ತಪ್ಪೇನು ಅಲ್ಲ ಎಂದು ಸಮರ್ಥಿಸಿಕೊಂಡರು.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ನಾನು ಭಗವದ್ಗೀತೆ ಓದುತ್ತೇನೆ ಎಂದು ಹೇಳುತ್ತಿದ್ದರು. ಇದರ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಅಂತಿಮವಾಗಿ ಸಿಎಂ ಜತೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಪಠ್ಯಗಳಲ್ಲಿ ಭಗವದ್ಗೀತೆಯನ್ನು ಅಳವಡಿಸಿದರೆ ತಪ್ಪೇನು ಇಲ್ಲ ಎಂದರು.
ಮಕ್ಕಳಿಗೆ ಒಳ್ಳೆಯ ಅಂಶಗಳು ಎಲ್ಲೆ ಇದ್ದರೂ ಅದನ್ನು ಅಳವಡಿಸಿಕೊಳ್ಳುವುದನ್ನು ನಾನು ಸ್ವಾಗತಿಸುತ್ತೇನೆ. ಕೆಲವರಿಗೆ ಮುಜುಗರವಾಗಬಹುದು. ಸರ್ಕಾರ ಇದಕ್ಕೆ ತಲೆಕೆಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಭಗವದ್ಗೀತೆಯಲ್ಲಿ ಅನೇಕ ಒಳ್ಳೆಯ ಅಂಶಗಳಿವೆ. ಪಠ್ಯಗಳಲ್ಲಿ ಇದನ್ನು ಅಳವಡಿಸಿಕೊಳ್ಳಲಿ. ಗುಜರಾತ್ ಮಾದರಿ ನಮ್ಮಲ್ಲೂ ಬಂದರೆ ಒಳ್ಳೆಯದು ಎಂದು ಹೇಳಿದರು.

