ಮೈಸೂರು: ಅಪ್ಪು ಅವರ ಪತ್ನಿ ಅಶ್ವಿನಿ ಅವರು ಎರಡು ಚಿನ್ನದ ಪದಕಗಳನ್ನು ನೀಡುವುದಾಗಿ ಮೈಸೂರು ವಿವಿ ಘಟಿಕೋತ್ಸವದ ವೇಳೆ ಪ್ರಕಟಿಸಿದ್ದಾರೆ.
ಪುನೀತ್ ರಾಜ್‍ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ ವೇಳೆ ಅಪ್ಪು ಪರವಾಗಿ ಪದವಿ ಸ್ವೀಕರಿಸಿದ ನಂತರ ಅವರು ಈ ಘೋಷಣೆ ಮಾಡಿದರು.
ಒಂದು ಚಿನ್ನದ ಪದಕ ಪಾರ್ವತಮ್ಮ ರಾಜ್‍ಕುಮಾರ್ ಹೆಸರಿನಲ್ಲಿ ಮತ್ತೊಂದು ಪದಕ ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ ಮುಂದಿನ ಘಟಿಕೋತ್ಸವ ಸಂದರ್ಭದಲ್ಲಿ ನೀಡಲಾಗುತ್ತದೆ.
ಪಾರ್ವತಮ್ಮ ರಾಜ್‍ಕುಮಾರ್ ಹೆಸರಿನಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ನಲ್ಲಿ ಹಾಗೂ ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ ಲಲಿತಕಲೆಯಲ್ಲಿ ಚಿನ್ನದ ಪದಕ ನೀಡುವುದಾಗಿ ಅಶ್ವಿನಿ ಪ್ರಕಟಿಸಿದ್ದಾರೆ.
ಮೈಸೂರು ವಿವಿ ದೇವರಗುಡಿ: ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ರಾಜ್‍ಕುಮಾರ್ ಇದೊಂದು ಸಮಾರಂಭ ಎನಿಸುತ್ತಿಲ್ಲ,ದೇವರ ಗುಡಿ ಎನಿಸುತ್ತಿದೆ ಎಂದು ಹೇಳಿದರು.
ನೀವೆಲ್ಲ ಗಣ್ಯರು ದೇವರುಗಳಂತೆ ಭಾಸವಾಗುತ್ತಿದೆ ನನ್ನ ತಮ್ಮನಿಗೆ ಇಂತಹ ಗೌರವ ಸಿಕ್ಕಿದೆ ಇದಕ್ಕೆ ಸಂತಸವಾಗುತ್ತಿದೆ,ಆದರೆ ಅವನಿಲ್ಲವಲ್ಲ ಎಂಬ ದುಃಖ ಕಾಡುತ್ತಿದೆ ಎಂದು ಭಾವುಕರಾದರು.
ನನ್ನ ತಮ್ಮನಿಗೆ ಈಗ 47 ವರ್ಷ.47ವರ್ಷಗಳ ಹಿಂದೆ ನಮ್ಮ ತಂದೆ ಡಾ.ರಾಜಕುಮಾರ್ ಅವರಿಗೆ ಇದೇ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು ಎಂದು ಸ್ಮರಿಸಿದರು.

