ಭ್ರಷ್ಟ ಅಧಿಕಾರಿಗಳ ಮಧ್ಯವರ್ತಿಗಳ ಮನೆ ಮೇಲೆ ಎಸಿಬಿ ದಾಳಿ:9 ಮಂದಿ ಕುಬೇರರು ಪತ್ತೆ

ಬೆಂಗಳೂರು: ಭ್ರಷ್ಟಾಚಾರದಲ್ಲಿ ತೊಡಗಿದ್ದ ಬಿಡಿಎ ಅಧಿಕಾರಿಗಳ ಮನೆಗಳ ಮೇಲೆ ಕೆಲ ದಿನಗಳ ಹಿಂದೆ ದಾಳಿ ಮಾಡಿ ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದ ಎಸಿಬಿ ಪೊಲೀಸರು ಇದೀಗ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಸಹಕರಿಸುತ್ತಿದ್ದ 9 ಮಧ್ಯವರ್ತಿಗಳ ಮನೆಗಳ ಮೇಲೂ ದಾಳಿ ಮಾಡಿದ್ದಾರೆ.

ಚಾಮರಾಜಪೇಟೆಯ ಬಿ.ಎನ್.ರಘು, ಆರ್‍ಟಿ ನಗರದ ಮೋಹನ್, ಮಲ್ಲತ್ತಹಳ್ಳಿಯ ಮುನಿರತ್ನ ಅಲಿಯಾಸ್ ರತ್ನವೇಲು, ದೊಮ್ಮಲೂರಿನ ಮನೋಜ್, ರಾಜರಾಜೇಶ್ವರಿನಗರದ ತೇಜು ಅಲಿಯಾಸ್ ತೇಜಸ್ವಿ, ಮುದ್ದಯ್ಯನಪಾಳ್ಯದ ಅಶ್ವಥ್, ಚಿಕ್ಕಹನುಮಯ್ಯ ಹಾಗೂ ಬಿಡಿಎ ಬಡಾವಣೆಯ ರಾಮ, ಲಕ್ಷ್ಮಣ ಅವರುಗಳ ಮನೆಗಳ ಮೇಲೆ ಎಸಿಬಿ ಎಸ್‍ಪಿ ಉಮಾಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿತು.

ಬಿಡಿಎಯಲ್ಲಿ ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರುಗಳು ಅಧಿಕಾರಿಗಳ ಜೊತೆ ಸೇರಿಕೊಂಡು ಭ್ರಷ್ಟಾಚಾರ ನಡೆಸುತ್ತಿದ್ದರು ಎಂಬ ಆರೋಪದ  ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ.

ಎಸಿಬಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿರುವ 9 ಮಧ್ಯವರ್ತಿಗಳು ಭಾರಿ ಕುಳಗಳಾಗಿದ್ದು, ವೈಭವೋಪೇತ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅವರುಗಳ ಮನೆಗಳಲ್ಲಿ ಕೆಜಿಗಟ್ಟಲೆ ಚಿನ್ನ, ಲಕ್ಷ ಲಕ್ಷ ಹಣ ಮತ್ತು ಐಷಾರಾಮಿ ಕಾರುಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿವೆ.

ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್‍ನಲ್ಲಿ ವಾಸಿಸುತ್ತಿರುವ ತೇಜಸ್ವಿ ಅವರ ಮನೆಯಲ್ಲೇ ಈಜುಕೋಳ ಇರುವುದು ಪತ್ತೆಯಾಗಿದೆ.

ಕೇವಲ 7 ವರ್ಷಗಳ ಹಿಂದೆ ಬಿಡಿಎ ಬ್ರೋಕರ್ ಆಗಿ ಕೆಲಸ ಆರಂಭಿಸಿದ್ದ ಈತ ಕೋಟಿ ಕೋಟಿ ಹಣ ಸಂಪಾದನೆ ಮಾಡಿದ್ದಾನೆ.

ಮುದ್ದಯ್ಯನಪಾಳ್ಯದ ಅಶ್ವಥ್  ಕೆಲ ವರ್ಷಗಳ ಹಿಂದೆ ಸಾಮಾನ್ಯ ಜೀವನ ಸಾಗಿಸುತ್ತಿದ್ದ. ಈಗ ಜ್ಞಾನಭಾರತಿ ಆರ್‍ಟಿಒ ಕಚೇರಿ ಸಮೀಪ ಅರಮನೆಯಂತಹ ಬಂಗಲೆ ಕಟ್ಟಿಸಿದ್ದಾನೆ. ಮಾತ್ರವಲ್ಲ ಈತನ ಬಳಿ ಕೋಟಿ ಬೆಲೆ ಬಾಳುವ ಹಲವಾರು ಐಷಾರಾಮಿ ಕಾರುಗಳಿವೆ.

ಹಣ ಮಾಡಿದ ನಂತರ ರಾಜಕೀಯ ಸೇರಲು ಹಪಹಪಿಸುತ್ತಿದ್ದ ಈತ ಸಚಿವರೊಬ್ಬರ ಬಳಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿದೆ.

ಮಲ್ಲತಹಳ್ಳಿಯ ಮುನಿರತ್ನ ಎಂಬಾತನ ಮನೆಯಲ್ಲಿ ಮಹತ್ವದ ಹಲವಾರು ದಾಖಲೆ ಪತ್ರಗಳು ಪತ್ತೆಯಾಗಿದೆ.

ಮನೋರಾಯನಪಾಳ್ಯದ ಮೋಹನ್ ಎಂಬಾತನ ಮನೆಯ ಬೀರು, ಲಾಕರ್‍ಗಳಲ್ಲಿ ಕೋಟಿ ಕೋಟಿ ಬೆಲೆಬಾಳುವ ಮುತ್ತು, ಚಿನ್ನ, ವಜ್ರದ ಆಭರಣಗಳು ಮತ್ತು ಗರಿ ಗರಿ ನೋಟಿನ ಕಂತೆಗಳು ಸಿಕ್ಕಿಬಿದ್ದಿವೆ.

ಈ 9 ಬ್ರೋಕರ್‍ಗಳು ಕುಬೇರರು, ಎಲ್ಲರ ಮನೆಗಳಲ್ಲೂ ಲಕ್ಷಗಟ್ಟಲೆ ಹಣ, ಚಿನ್ನದ ಓಡವೆಗಳು, ದೇಶ ವಿದೇಶಗಳ ಕೂಲಿಂಗ್ ಗ್ಲಾಸ್‍ಗಳು, ವಾಚ್‍ಗಳು ಪತ್ತೆಯಾಗಿವೆ.

ಅಲ್ಲದೆ ಬಿಡಿಎಗೆ ಸಂಬಂಧಿಸಿದ ದಾಖಲೆ ಪತ್ರಗಳು ಲಭ್ಯವಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.